
ವಿಧಾನ ಪರಿಷತ್ತು: ಇತ್ತೀಚೆಗೆ ನಡೆದಿರುವ ಗಣಿ ಹಂಚಿಕೆಯು ಅರ್ಕಾವತಿ ಹಗರಣಕ್ಕಿಂತ ದೊಡ್ಡ ಹಗರಣ ಎಂದು ಸರ್ಕಾರದ ವಿರುದ್ಧ ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಸದನ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಈಶ್ವರಪ್ಪ ಕೇಂದ್ರ ಸರ್ಕಾರವು ಗಣಿ ಕಾಯಿದೆಗೆ ಹಲವು ಮಾರ್ಪಾಡು ಮಾಡಿ, ಸುಗ್ರೀವಾಜ್ಞೆ ತಂದು ಅಧಿಸೂಚನೆ ಹೊರಡಿಸಿದೆ. ಅದರಂತೆ, ರಾಜ್ಯ ಸರ್ಕಾರ ಗಣಿ ಹರಾಜು ಮಾಡುವ ಅವಕಾಶ ಪಡೆದುಕೊಂಡಿದೆ. ಇದರ ಉದ್ದೇಶ ಅಂತಿಮ ಬಳಕೆದಾರನಿಗೆ ಅನುಕೂಲವಾಗಬೇಕೆಂಬುದೇ ಆಗಿದೆ. ಆದರೆ, ರಾಜ್ಯದಲ್ಲಿ ತರಾತುರಿಯಲ್ಲಿ ಗಣಿ ಲೈಸೆನ್ಸ್ ಮರು ಹಂಚಿಕೆ ಮಾಡಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಕೇಂದ್ರದ ನೂತನ ಅಧಿಸೂಚನೆಯಂತೆ ರಾಜ್ಯ ಸರ್ಕಾರಗಳು ಮಾಡುವ ಗಣಿ ಹರಾಜಿನಲ್ಲಿ ಯಾವುದೇ ಮಧ್ಯಸ್ಥಿಕೆ ಕಂಪನಿ, ವ್ಯಾಪಾರಿಗಳು ಆ ಗಣಿಯನ್ನು ವ್ಯಾಪಾರ ಮಾಡಲು ಬಳಸುವಂತಿಲ್ಲ. ಕೊನೆ ಬಳಕೆದಾರ ಅಂದರೆ, ಕಾರ್ಖಾನೆಗಳೇ ನೇರವಾಗಿ ಹರಾಜಿನಲ್ಲಿ ಪಾಲ್ಗೊಳ್ಳಬೇಕು. ಹಾಗೆಯೇ ಬಿಡ್ ಮೊತ್ತದ ಶೇ.35 ಕ್ಕಿಂತ ಹೆಚ್ಚು ಹರಾಜು ಕೂಗ ಬೇಕು.ಇದರಿಂದ ರಾಜ್ಯ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರಲಿದೆ ಎಂದು ವಿವರಿಸದರು.
ಜ.12ರಂದು ಕೇಂದ್ರ ಸರ್ಕಾರದ ಅಧಿಸೂಚನೆ ಹೊರಟ ನಂತರವೂ ರಾಜ್ಯ ಸರ್ಕಾರ ಏಳು ಕಂಪನಿಗಳಿಗೆ ಒಟ್ಟಾರೆ ಒಂದು ಸಾವಿರ ಎಕರೆಯಲ್ಲಿ ಗಣಿ ನಡೆಸಲು ಅವಕಾಶ ನೀಡಿದೆ. ಅಚ್ಚರಿ ಎಂದರೆ ಸಿಬಿಐ ತನಿಖೆಗೊಳಪಟ್ಟ ಕಂಪನಿಯೊಂದಕ್ಕೂ 400 ಎಕರೆ ನೀಡಲಾಗಿದೆ. ಎಂಎಸ್‍ಪಿಎಲ್‍ಗೆ 500 ಎಕರೆ ನೀಡಲಾಗಿದೆ. ಈ ವಿಚಾರದಲ್ಲಿ ಬೆಂಗಳೂರಿನ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯು ಪ್ರಧಾನ ಮಂತ್ರಿಗೆ ಪತ್ರ ಬರೆದು ಈ ರೀತಿ ನಡೆದಿರುವ ಗಣಿ ಮರು ಹಂಚಿಕೆಯನ್ನು ರದ್ದು ಮಾಡುವಂತೆ ಕೋರಿದೆ ಎಂದು ಈಶ್ವರಪ್ಪ ಹೇಳಿದರು. ವಿ.ಸೋಮಣ್ಣ ದನಿಗೂಡಿಸಿದರು.
ಅಂತಿಮವಾಗಿ ಮುಖ್ಯಮಂತ್ರಿಯವರೇ ಖುದ್ದಾಗಿ ಉತ್ತರ ಕೊಡುತ್ತಾರೆ ಎಂದು ಸಭಾನಾಯಕರು ಹೇಳಿ, ಈಶ್ವರಪ್ಪನವರ ಅಬ್ಬರವನ್ನು ತಗ್ಗಿಸಿದರು. ಒಂದು ಹಂತದಲ್ಲಿ ಈಶ್ವರಪ್ಪನವರಿಗೆ ವಿಚಾರ ಪ್ರಸ್ತಾಪ ಮಾಡಲು ಅವಕಾಶ ಕೊಡಬಾರದು, ಪ್ರತ್ಯೇಕ ನಿಯಮಾವಳಿ ಅಡಿ ಅರ್ಜಿ ಹಾಕಲಿ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಆದರೆ, ವಿಷಯ ಮಂಡನೆಗೆ ಅವಕಾಶ ಪಡೆದುಕೊಂಡ ಪ್ರತಿಪಕ್ಷ ಸದಸ್ಯರ ಮಾತಿನ ನಡುವೆಯೇ ಈಶ್ವರಪ್ಪ ತಮ್ಮ ಮಾತನ್ನು ಪೂತ್ರಿಗೊಳಿಸಿದರು.
Advertisement