ವಿಧಾನ ಮಂಡಲದಲ್ಲೂ 'ಪೊರಕೆ' ಕದನ

ವಿಧಾನಸಭೆ
ವಿಧಾನಸಭೆ
Updated on

ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳಲ್ಲಿ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಸ್ತಾಪವಾಗಿ, ಕಾಂಗ್ರೆಸ್-ಬಿಜೆಪಿ ಸದಸ್ಯರು ಪರಸ್ಪರ ಕಾಲೆಳೆದುಕೊಂಡರು.

'ದೆಹಲಿಯಲ್ಲಿ ಎಲ್ರೀ ಮೋದಿ, ಏನಾಯಿತು ನಿಮ್ಮ ಹವಾ... ಮುಗಿದು ಹೋಯಿತಲ್ಲಾ...3ಕ್ಕೆ ಬಂದು ನಿಂತಿದ್ದೀರಿ...', ನಮ್ಮದಿರಲಿ ನಿಮ್ಮದೇನು ನೋಡಿಕೊಳ್ಳಿ. ಐತಿಹಾಸಿಕ ಪಕ್ಷ ಅನ್ನುತ್ತೀರಿ, ಸೊನ್ನೆ ಸುತ್ತಿದ್ದೀರಿ, 'ಝೀರೋ' ಆಗಿದ್ದೀರಿ...

ಇದು ವಿಧಾನಸಭೆಯಲ್ಲಿನ ಝಲಕ್. ಬಿಜೆಪಿಯ ಆರ್. ಅಶೋಕ್, ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ಅನ್ನು ಝೀರೋ ಎಂದು ಹೀಯಾಳಿಸಿದರೆ, ಸಚಿವರಾದ ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ ನಿಮ್ಮ ಹವಾ ಹೋಯಿತಲ್ಲ, ಮೋದಿ ಎಲ್ಲಿ ಎಂದು ತಿವಿದರು. ಪರಸ್ಪರ ವಾಗ್ಯುದ್ಧ ಪ್ರಾರಂಭವಾಯಿತು. ಸ್ಪೀಕರ್ ಮಧ್ಯೆ ಪ್ರವೇಶಿಸಿ ಎಲ್ಲದಕ್ಕೂ ತೆರೆ ಎಳೆದರು. ನಂತರ ಜೆಡಿಎಸ್‌ನ ಕೋನರೆಡ್ಡಿ, 'ಇಬ್ಬರೂ ಸೋತಿದ್ದೀರಿ, ಬಿಡಿ' ಎಂದು ಇಬ್ಬರ ಕಾಲನ್ನೂ ಎಳೆದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆಯೂ ಈ ವಿಚಾರ ಪ್ರಸ್ತಾಪವಾಯಿತು. ನಾನು ಈ ಮಾತು ಹೇಳುವುದರಿಂದ ಪರಿಣಾಮ ಏನೇ ಆದರೂ ಚಿಂತೆ ಇಲ್ಲ. ಆದರೆ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಜನತಂತ್ರದ ವಿಜಯ ಎಂದು ರಮೇಶ್ ಕುಮಾರ್ ಹೇಳಿದರು. ನಿಮಗಿಂತ ನಾವು ಪರವಾಗಿಲ್ಲ ಎಂದು ಇಲ್ಲಿ ಯಾರೂ ಹೇಳಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ದೆಹಲಿಯಲ್ಲಿ ಕೇಂದ್ರ ಸರ್ಕಾರ ಇಟ್ಟುಕೊಂಡರೂ ನಿಮಗೆ ಸಿಕ್ಕಿದ್ದು ಮೂರು ಸ್ಥಾನ. ಅಲ್ಲರಿ ಅಷ್ಟೊಂದು ಅಬ್ಬರದ ಪ್ರಧಾನಿ ಇದ್ದರೂ ನಾಲ್ಕು ಸ್ಥಾನ ಕೊಟ್ಟಿಲ್ಲವಲ್ಲರಿ ಎಂದು ವ್ಯಂಗ್ಯವಾಡಿದರು.

ಇದಕ್ಕೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪ್ರತಿಶತ ಮತದಾನ ನಮಗೆ ಮೊದಲಿನಷ್ಟೇ ಇದೆ. ನಿಮಗೆ ಏನೂ ಇಲ್ಲ ಎಂದಾಗ, ಶೆಟ್ಟರೇ, ಮೀಸೆ ಸೈಜ್ ಎಷ್ಟು ಎಂದು ಯಾರೂ ಕೇಳಲ್ಲ, ಎಷ್ಟು ಮಕ್ಕಳು ಎಂದು ಕೇಳುವುದು ವಾಡಿಕೆ ಎಂದಾಗ ಸದನ ನಗೆಗಡಲಲ್ಲಿ ಮುಳುಗಿತು. ಜನ ನಿಮ್ಮನ್ನು ರಿಜೆಕ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನವರು ಎಷ್ಟು ದಿನ ಅಂಥ ದೇಶದ ಸೇವೆ ಮಾಡ್ತೀರಿ ಎಂದು ಸ್ವಲ್ಪ ವಿಶ್ರಾಂತಿ ನೀಡಿದ್ದಾರೆ ಎಂದರು.

ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸರ್ಕಾರದ ಭವರಸೆಗಳು ಈಡೇರಿಕೆಯಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಆಡಳಿತ ಪಕ್ಷದ ಉಗ್ರಪ್ಪ, ಹಾಗಿದ್ದರೆ 100 ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತರುವ ಕೇಂದ್ರ ಸರ್ಕಾರದ ಭರವಸೆ ಏನಾಗಿದೆ ಎಂದು ಮರು ಪ್ರಶ್ನೆ ಹಾಕಿದರು. ಬಳಿಕ ಉಭಯ ಪಕ್ಷಗಳ ಸದಸ್ಯರು ಪಕ್ಷಗಳ ನಿಲುವುಗಳನ್ನು ಸಮರ್ಥಿಸಲು ಮುಂದಾಗಿ ಗಲಾಟೆಗೆ ನಿಂತರು. ನಂತರ ಉಗ್ರಪ್ಪ ಮಾತಾನಾಡಿ, ನೀವು ಹೀಗೆ ಮಾಡಿದ್ದಕ್ಕೇ ದಿಲ್ಲಿಯಲ್ಲಿ ನಿಮ್ಮ ಪಕ್ಷ ಸೋತಿದ್ದು ಎಂದು ರೇಗಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com