
ವಿಧಾನಸಭೆ: ಗಾಂಧಿಗಿಂತ ಸೇಂದಿಗೇ ಇಂದು ಹೆಚ್ಚು ಮನ್ನಣೆ. ಗಾಂಧಿಗಿರಿಗಿಂತ ಬ್ರಾಂದಿ ಮಾರೋರನ್ನೇ ಇವರು ಮಾತನಾಡಿಸೋದು.ಚಳವಳಿ ಮಾಡುವವರನ್ನು ಯಾರೂ ಮಾತನಾಡಿಸುತ್ತಿಲ್ಲ. ಗಾಂಧಿ ನಮ್ಮ ಅಧಿನಾಯಕ ಎನ್ನುವ ಕಾಂಗ್ರೆಸ್ ಸರ್ಕಾರ, ಅವರ ಹಾದಿಯಲ್ಲಿ ಹೋರಾಡುವವರನ್ನು ಕೇಳೋದೆ ಇಲ್ಲ. ಹಾಗಿದ್ದರೆ, ಗಾಂಧಿ ಫೋಟೋ ಯಾಕೆ ಹಾಕ್ಕೊಂಡಿದ್ದೀರಿ? ಕನ್ನಡ ಭಾಷೆ ಕಲಿಕೆ ಕಡ್ಡಾಯ ಎನ್ನುತ್ತಾರೆ,
ಕಾನ್ವೆಂಟ್ಗೆ ಪರ್ಮಿಷನ್ ಕೊಡುತ್ತಲೇ ಇರುತ್ತಾರೆ; ಸಿಗರೇಟು ಧೂಮಪಾನ ಮಾಡಬೇಡಿ ಎನ್ನುತ್ತಾರೆ, ಅದನ್ನು ನಿರ್ಬಂಧಿಸೊಲ್ಲ; ಹೆಂಡಸಾರಾಯಿ ಸಹವಾಸ, ಹೆಂಡತಿಮಕ್ಕಳ ಉಪವಾಸ ಎಂದು ಘೋಷಿಸುತ್ತಾರೆ, ಹೆಂಡ, ಬ್ರಾಂದಿ ಮಾರಾಟಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಹೀಗೆ ತಮ್ಮದೇ ವಿಶಿಷ್ಟ ಧಾಟಿಯಲ್ಲಿ ಸರ್ಕಾರವನ್ನು ಸದನದಲ್ಲಿ ಬುಧವಾರ ಟೀಕಿಸಿದವರು ಶಾಸಕ ಪುಟ್ಟಣ್ಣಯ್ಯ. ನೈಸ್ ಯೋಜನೆಗೆ 18 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದೀರಿ. ರೈತನಿಗೆ ದುಡ್ಡೂ ಇಲ್ಲ, ಭೂಮಿನೂ ಇಲ್ಲ. ಅದನ್ನು ಅವನು ಮಾರಿಕೊಳ್ಳೋಂಗಿಲ್ಲ. ಹೀಗಾದರೆ ರೈತರ ಗತಿಯೇ ನು? ಏನಾದರು ಒಂದು ತೀರ್ಮಾನ ಮಾಡಿ..ಲ್ಯಾಂಡ್ ಬ್ಯಾಂಕ್ ಎಂದು ಮಾಡಿದ್ದೀರಿ.
ನಿಮಗ್ಯಾರಿಗಾದರೂ ಭೂಮಿ ಜ್ಞಾನ ಇದೆಯೇ ? ಯಾವ ಅಧಿಕಾರಿಗೆ ಭೂಮಿ ಬಗ್ಗೆ ಗೊತ್ತು ಹೇಳಿ.ಭೂಮಿ ಸ್ವಾಧೀನ ಮಾಡಿಕೊಂಡರೆ ಅಷ್ಟೇ ಸಾಗದು, ಅದರಿಂದ ಯಾರಿಗೂ ಲಾಭ ಆಗುತ್ತಿಲ್ಲ. ರೈತ ಗುಳೆ ಹೋಗುತ್ತಿದ್ದಾನೆ. ಅದನ್ನು ತಡೆಯಲು ಒಂದು ನೀತಿ ತನ್ನಿ. ಗುಳೆ ಹೋಗುವವನಿಗೆ ಒಂದಷ್ಟು ಸೌಲಭ್ಯ ನೀಡಿ ಧೈರ್ಯ ತುಂಬಿ ನಾವಿದ್ದೇವೆ ಎಂದು ಹೇಳಿ. ಅಮೆರಿಕದವರು ಬಂದರೆ ನಮ್ಮ ಸಿಎಂ ಸೂಟು ಧರಿಸಿಕೊಂಡು ಹೋಗಿ ಭೂಮಿ ಕೊಡುತ್ತಾರೆ. ಆದರೆ ಒಂದು ತಾಂಡಾವನ್ನು ಕಂದಾಯಗ್ರಾಮ ಮಾಡಿ ಎಂದರೆ ಅಧಿಕಾರಿಗಳು ಅದು ಬರಲ್ಲ, ಇದು ಬರಲ್ಲ ಅಂತಾರೆ. ಸರ್ಕಾರದಲ್ಲಿ ಯಾವುದಕ್ಕೂ ಒಂದು ನೀತಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಮೂರ್ನಾಲ್ಕು ವರ್ಷದಿಂದ ಮಾತನಾಡುತ್ತಿದ್ದೇವೆ ಮರಳು ಮಾಫಿಯಾ ನಿಲ್ಲಿಸಲು ಯಾರಿಗೂ ಸಾಧ್ಯವಾಗಿಲ್ಲ. ಇದರಿಂದಾಗಿ ಭ್ರಷ್ಟಾಚಾರ ವಿಕೇಂದ್ರೀಕರಣವಾಗಿದೆ. ಒಂದು ಲೋಡ್ ಮರಳುರು. 40 ಸಾವಿರ ಆಗಿದೆ. ಇದರಲ್ಲಿ 25 ಸಾವಿರ ಲಂಚಕ್ಕೇ ಹೋಗುತ್ತದೆ. ಪಿಎಸ್ ಐನಿಂದ ಹಿಡಿದು ಮೇಲ್ಮಟ್ಟದವರೆಗೂ ಹೋಗುತ್ತದೆ. ಒಂದು ಮರಳು ನೀತಿ ಮಾಡಲು ನಮಗೆ ಸಾಧ್ಯವಾಗಿಲ್ಲ. ಲೋಕಾಯುಕ್ತದಲ್ಲಿ 25 ಸಾವಿರ ಕೇಸುಗಳಿವೆ. ಎಷ್ಟು ಜನಕ್ಕೆ ಶಿಕ್ಷೆ
ಕೊಡಿಸಿದ್ದೀರಿ? ಗುಡಿಸಲು ಮುಕ್ತ ರಾಜ್ಯ ಎನ್ನುತ್ತಿದ್ದೀರಿ. ಎಷ್ಟು ಪಂಚಾಯಿತಿಗೆ ಮನೆ ನಿರ್ಮಿಸಲು ಅವಕಾಶ ಕೊಟ್ಟಿದ್ದೀರಿ? ಗ್ರಾಮ ಪಂಚಾಯಿತಿಗಳನ್ನು ಗುಲಾಮಗಿರಿಯಲ್ಲಿ ಇರಿಸಿದ್ದೀರಿ ಎಂದು ಟೀಕಿಸಿದರು. ನಗರ ಭಾಗದವರಿಗೆ ಪ್ರತಿನಿತ್ಯ 135 ಲೀಟರ್ ನೀರು ಎಂದು ಹೇಳಿದ್ದೀರಿ. ಗ್ರಾಮೀಣ ಭಾಗದವರಿಗೆ ಇದೀಗ ಹೆಚ್ಚಳ ಮಾಡಿ 85 ಲೀಟರ್ಮಾಡಿದ್ದೇವೆ. ನಮಗೇಕೆ ಕಡಿಮೆ, ನಾವು ಚೆನ್ನಾಗಿ ತೊಳೆದುಕೊಳ್ಳೋದು ಬೇಡ್ವಾ ಸ್ವಾಮಿ? ಉಷ್ಣ ವಿದ್ಯುತ್ ಎಂದು ಯಾರಿಗೆ ಉಷ್ಣ ಹೆಚ್ಚಿಸುತ್ತಿದ್ದೀರಿ.ಪರಿಸರ ಉಳಿಸಿ, ಸೋಲಾರ್ ವಿದ್ಯುತ್ ಮಾಡಿ. ನೀರು ಇಲ್ಲ ಎನ್ನುತ್ತೀರಿ? ಯಾಕಿಲ್ಲ? ಪ್ರವಾಹದಿಂದ ಮೂರು ತಿಂಗಳು ಎಷ್ಟು ನೀರು ಹೋಗುತ್ತದೆ. ಅದೆಲ್ಲ ಹಿಡಿದುಕೊಳ್ಳಿ ಎಂದು ಲೇವಡಿ ಮಾಡಿದರು.
Advertisement