ರಮಾನಾಥ ರೈ
ರಮಾನಾಥ ರೈ

ಕಸ್ತೂರಿ ರಂಗನ್ ವರದಿ ಆತಂಕ ಬೇಡ, ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ, ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ...
Published on

ವಿಧಾನಪರಿಷತ್ತು: ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ, ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅರಣ್ಯ ಸಚಿವ ರಮಾನಾಥ ರೈ ಮೇಲ್ಮನೆ ಸದಸ್ಯರಿಗೆ ಭರವಸೆ ನೀಡಿದರು. ಸದಸ್ಯ ಐವನ್ ಡಿ ಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಸ್ತೂರಿ ರಂಗನ್ ವರದಿಯ ಕುರಿತಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ತನ್ನ ಶಿಫಾರಸನ್ನು ಮಂಡಿಸಬೇಕು. ಅದಕ್ಕೆ ಮೊದಲು ರಾಜ್ಯದ ಸಂಪುಟ ಉಪ ಸಮಿತಿ ಜನರಿಂದ ಅಭಿಪ್ರಾಯ ಸಂಗ್ರಹಿಸಬೇಕು. ಇನ್ನೂ ಎರಡು ಜಿಲ್ಲೆಯಲ್ಲಿ ಸಂಪುಟ ಉಪ ಸಮಿತಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಅಂತಿಮವಾಗಿ ತನ್ನ ಶಿಫಾರಸನ್ನು ಕೇಂದ್ರಕ್ಕೆ ನೀಡಲಿದೆ. ಈ ವರದಿ ಅನುಷ್ಠಾನವಾಗುವ 6 ರಾಜ್ಯಗಳ ಪೈಕಿ ಒಂದು ರಾಜ್ಯ ಮಾತ್ರ ತನ್ನ ಶಿಫಾರಸನ್ನು ಸಲ್ಲಿಸಿದೆ. ಏಪ್ರಿಲ್ 15ರವರೆಗೂ ಶಿಫಾರಸು ಸಲ್ಲಿಕೆಗೆ ಅವಕಾಶವಿದೆ. ಅದರ ಆಧಾರದಮೇಲೆ ಕೇಂದ್ರ ನಿರ್ಧಾರ ಪ್ರಕಟಿಸುತ್ತದೆ ಎಂದರು. ಕಸ್ತೂರಿ ರಂಗನ್ ವರದಿಯ ಸಾಧಕಬಾಧಕದ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗುತ್ತಿದೆ. ಗಣಿಗಾರಿಕೆ ಕ್ರಶರ್, ಮರಳು ಗಣಿಗಾರಿಕೆಯಂತಹ ವಿಚಾರದಲ್ಲಿ ವರದಿಯಲ್ಲಿ ಹೇಳಿರುವಂತಹ ನಿರ್ಧಾರ ಕೈಗೊಳ್ಳಲು ನಮ್ಮದು ಸಹಮತವಿದೆ. ಆದರೆ ಇನ್ನೂ 45 ಅಂಶಗಳಿಗೆ ನಮ್ಮ ಸಹಮತವಿಲ್ಲ. ಕಸ್ತೂರಿ ರಂಗನ್ ವರದಿ ಒಪ್ಪಿಕೊಳ್ಳುವ ವಿಚಾರದಲ್ಲಿ ಕೇರಳ ಮಾದರಿ ಅನುಸರಿಸಬೇಕೆಂಬ ಮಾತೂ ಕೇಳಿಬರುತ್ತಿದೆ, ನಾವು ಕೇರಳ ಮಾದರಿಗಿಂತ ಉತ್ತಮ ಮಾದರಿಯಲ್ಲಿ ಶಿಫಾರಸು ಮಾಡುತ್ತೇವೆ ಎಂದು ಹೇಳಿದರು. ಅರಣ್ಯ ಪ್ರದೇಶ ಮತ್ತು ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ವಾಸಿಸುವ ಜನರನ್ನು ಒಕ್ಕಲೆಬ್ಬಿಸುತ್ತಾರೆ ಎನ್ನುವುದು ಸುಳ್ಳು. ಕೃಷಿಕ ರು ರಸಗೊಬ್ಬರ, ಕೀಟನಾಶಕ ಬಳಸುವ ಬಗ್ಗೆ ಯಾವುದೇ ನಿರ್ಬಂಧ ವನ್ನು ವರದಿ ಶಿಫಾರಸ್ಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com