ವಿಧಾನಸಭೆ: ಕೆಪಿಎಸ್‍ಸಿಯ ಗೆಜೆಟೆಡ್ ಪ್ರೊಬೆಷನರಿಯ 362 ಹುದ್ದೆಯ ರದ್ದು ವಿಷಯವಾಗಿ ಆರಂಭವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‍ನ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವಿನ ವಾಗ್ದಾಳಿ, ಅರ್ಕಾವತಿ ಡಿನೋಟಿಫೈಗೂ ಸರಿದು ಪರಸ್ಪರ `ಅವಿವೇಕಿ' ಎನ್ನುವ ಮಟ್ಟಕ್ಕೆ ಬೆಳೆದು ತಾಸುಗಟ್ಟಲೆ ಇಬ್ಬರು ವಾಕ್ಸಮರ ನಡೆಸಿ, ಸವಾಲು-ಪ್ರತಿಸವಾಲು ಹಾಕಿದರು.
ಸಿದ್ದು: ಕೆಪಿಎಸ್‍ಸಿಯ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆದು, ಸಿಐಡಿ ತನಿಖೆ ನಡೆದ ಮಧ್ಯಂತರ ವರದಿ ಬಂದ ಮೇಲೆ
ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅವ್ಯವಹಾರ ನಡೆದಿರುವುದು ಸಾಬೀತಾಗಿದೆ ಎಂದು ಗೊತ್ತಾದ ಮೇಲೆ ವಿವೇಚನಯುತವಾಗಿ ಪಟ್ಟಿ ರದ್ದು ಮಾಡಲಾಗಿದೆ.
ಎಚ್‍ಡಿಕೆ : ಆ ವರದಿಯಲ್ಲಿ ಗಂಗಾಧರಯ್ಯ ಎಂದು ದೂರು ಕೊಟ್ಟವನು ಏನಾದ? 74 ಬ್ಯಾಂಕ್
ಅಕೌಂಟ್ ನಲ್ಲಿ ಎಲ್ಲಾದರೂ ಭ್ರಷ್ಟಾಚಾರದ ಹಣ ಸಿಕ್ಕಿದೆಯೇ? ಅದೇ ಭ್ರಷ್ಟರ ಕೈಯಲ್ಲಿ ಹೊಸ ನೋಟಿಫಿ ಕೇಷನ್ ಮಾಡು ತ್ತಿದ್ದೀರಿ. ಅಮಾನತು ಮಾತಿಲ್ಲ . 362 ಮಂದಿ ನಿಮಗೆ ಏನು ಅನ್ಯಾಯ ಮಾಡಿದ್ದರು. ನೀವು ತೆಗೆದುಕೊಂಡಿರುವಂತಹ ನಿರ್ಧಾರ ಏನಿದೆ. ಅದು ಅತ್ಯಂತ ಅವಿವೇಕದಿಂದ ಕೂಡಿದೆ. ಇದನ್ನು ಪ್ರೂವ್ ಮಾಡುತ್ತೇನೆ
ಸಿದ್ದು: ಅವಿವೇಕ ಅಂತಾ ಬಳಸಿದ್ದು ಸರಿಯಲ್ಲ. ನೀವು ಅವಿವೇಕದಿಂದ ಮಾತನಾಡುತ್ತಿದ್ದೀರಿ. ಕೋರ್ಟ್‍ನಲ್ಲಿದೆ. ಹೋಗಿ ಅಲ್ಲಿ ಸಾಕ್ಷಿ ಹೇಳಿ.
ಎಚ್‍ಡಿಕೆ: ಯಾವ ಪ್ರಾಮಾಣಿಕತೆ ಇದೆ ಇವರಿಗೆ? ಭ್ರಷ್ಟರು ಅಂತಾ ಆದ ಮೇಲೆ ಅದೇ ಮೆಂಬರ್‍ಗಳನ್ನು ಏಕೆ ಇಟ್ಟುಕೊಂಡಿದ್ದೀರಿ?
ಸಿದ್ದು: ನೀವೇನು ಹರಿಶ್ಚಂದ್ರರಾ? ನೀವು ಮಾಡಿದ್ದನ್ನು ಹೇಳಲಾ?
ಎಚ್‍ಡಿಕೆ: ನಾವು ಹರಿಶ್ಚಂದ್ರ ಎಂದು ಹೇಳಿಕೊಂಡಿಲ್ಲ. ನೀವೇ ಪ್ರಾಮಾಣಿಕರು ಎಂದು ಹೇಳಿಕೊಂಡಿರೋದು. ಸಿದ್ದು: ಭ್ರಷ್ಟಾಚಾರ ಕಡಿವಾಣ ಹಾಕಲು ಮಾಡಿದ್ದೇವೆ.
ಎಚ್‍ಡಿಕೆ: ಅದಕ್ಕೇ ಲೋಕಾಯುಕ್ತದಲ್ಲಿ ಟ್ರಾಪ್ ಆದವರನ್ನು ಸದಸ್ಯರನ್ನಾಗಿ ಮಾಡಲು ಹೊರಟಿರೋದು.
ಸಿದ್ದು: ಯಾವ ಲೋಕಾಯುಕ್ತ ಆಗಿದೆ, ನಮಗೆ ಗೊತ್ತಿಲ್ಲ. ನಾವು ವಿವೇಚನೆ ಇಲ್ಲದೆ, ಕಾನೂನು ಬಿಟ್ಟು
ಹೋಗೋದಿಲ್ಲ. ಅವಿವೇಕ ಎಂಬ ಪದ ಇದೆಯಲ್ಲ, ಪಾರ್ಲಿಮೆಂಟರಿ ಪದವಾಗಿ ಬಳಸಬಹುದಲ್ಲ. ನೀವು ಮುಖ್ಯಮಂತ್ರಿಯಾಗಿದ್ದವರು. ನಾನು ಕೂಡ
ಹೇಳಬಹುದು. ಕುಮಾರಸ್ವಾಮಿ ಅವರು ವಿವೇಕ ಇಲ್ಲ ಅಂತಾ ಹೇಳಬಹುದು. ಅವಿವೇಕದಿಂದ ಮಾತನಾಡುತ್ತಾರೆ ಎಂದು ಹೇಳಬಹುದು.
ಎಚ್‍ಡಿಕೆ: ಹೋಟಾ ಕಮಿಟಿ ವರದಿಯಲ್ಲಿ 24ರಲ್ಲಿ ಯಾವುದೇ ಕಾರಣಕ್ಕೂ ಬಾರ್‍ಕೋಡ್ ಪ್ರಶ್ನೆಪತ್ರಿಕೆ ಬದಲಾಯಿಸಲು ಸಾಧ್ಯ
ಇಲ್ಲ ಅಂದಿದ್ದಾರೆ. ಅದಕ್ಕಿಂತ ಬೇಕಾ ರಿಪೋರ್ಟ್. ಭ್ರಷ್ಟಾಚಾರ ನಿಲ್ಲಿಸುತ್ತಾರಂತೆ. ನೋಡೋಣ, ನಿಲ್ಲಿಸ್ರೀ ನಿಮಗೆ ಅಧಿ ಕಾರ
ಕೊಟ್ಟಿದ್ದಾರೆ.
ಸಿದ್ದು: ಕೆಪಿಎಸ್‍ಸಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂಬುದು ಸ್ಪಷ್ಟ ನಿರ್ಧಾರ. ಎಚ್‍ಡಿಕೆ: ಭ್ರಷ್ಟಾಚಾರ ನಿಲ್ಲಿಸಲು ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ನಿಲ್ಲಿಸಬೇಡಿ ಅಂತಾ ಹೇಳಿಲ್ಲ. ಸಿಐಡಿ ನೀಡಿರುವ ವರದಿಯಲ್ಲಿ ನಿಮ್ಮ ಸೆಕ್ರೇಟರಿ ಇದ್ದಾರಲ್ಲ ಅವರು 9 ಕಡೆ ತಪ್ಪು ಮಾಡಿದ್ದಾರೆ. ಅವರ ಮೇಲೆ
ಏನು ಆಕ್ಷನ್ ತಗೊಂಡಿದ್ದೀರಿ? ಎಲ್ಲಿ ತೆಗೆದುಹಾಕಿದ್ದೀರಿ?
ಸಿದ್ದು: ಯಾವ ಯಾವ ಕಾಲದಲ್ಲಿ ಯಾರು ಏನೇನ್ ಮಾಡಿದ್ದಾರೆ ಚರ್ಚೆ ಮಾಡೋಣವೇ?
ಎಚ್‍ಡಿಕೆ: ಮಾಡೋಣ, ನಾನು ತಯಾರಾಗಿದ್ದೇನೆ. ಎಲ್ಲ ಚರ್ಚೆ ಆಗಲಿ. ಅಸಿಸ್ಟೆಂಟ್ ಕಮಿಷನರ್ ಮಗಳು ಕೊಟ್ಟಿದ್ದಾರಲ್ಲ ಅವರ ಮೇಲೆ ನೀಡಿದ ದಾಖಲೆಗೆ ನೀವು
ಕ್ರಮ ಕೈಗೊಂಡಿದ್ದೀರಾ?
ಸಿದ್ದು: ನಿಮ್ಮ ಪ್ರಕಾರ ಅವರು ದುಡ್ಡು ಹೊಡೆದಿರಬಹುದು. ನೀವು ಹೇಳುತ್ತಿರೋದು. ಅಲ್ಲೋಗಿ ಸಾಕ್ಷಿ ಕೊಡ್ರೀ. ಕೋಟ್ರ್ ಗೆ ಹೋಗಿ ವಿಟ್ನೆಸ್ ಆಗಿ. ಇವರು ಹೇಳಿದ ಹಾಗೆ ಕೇಳೋಕೆ
ಇವರು ಹೇಳಿದ ಹಾಗೆ ಕೇಳೋಕೆ ಆಗಲ್ಲ. ಇವರ ಕಾಲದಲ್ಲೇ ಭ್ರಷ್ಟಾಚಾರನೇ ಇರಲಿಲ್ಲ? ನಿಮ್ಮ ಕಾಲದಲ್ಲೇ ಎಲ್ಲ ಆಗಿರೋದು
ಎಚ್‍ಡಿಕೆ: ಚರ್ಚೆ ಮಾಡೋಕೆ ಕೊಡಿ. ಅವರ ಎಲ್ಲವನ್ನು ದಾಖಲೆ ಮೂಲಕ ಆಚೆ ಹಾಕುತ್ತೇನೆ. ಇರೋದನ್ನು ಹೇಳುತ್ತಿದ್ದೇನೆ.
ರಮೇಶ್‍ಕುಮಾರ್: ಇದೇ ಸದನದಲ್ಲಿ ಗೋಪಾಲಗೌಡರು ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾತನಾಡಿ, ನಿಮ್ಮ ಸರ್ಕಾರವನ್ನ ಮುಂಡೆ ಮಕ್ಕಳ ಸರ್ಕಾರ ಅನ್ನಬೇಕು ಅನ್ನಿಸುತ್ತೆ. ಅನ್ನೋಕಾಗುತ್ತಾ? ಆದ್ರೆ ಮುತ್ತೈದೆಯರಿಗೆ ಇಂಥಾ ಮಕ್ಕಳಿರ್ತಾರೇನ್ರೀ? ಕುಮಾರಸ್ವಾಮಿ ಅವರಿಗೆ ಏನು ನಾನು ಹೇಳೋದಂದ್ರೆ
ಅವಿವೇಕ ಎಂದು ಹೇಳಬೇಡಿ. ವಿವೇಚನಾರಹಿತ, ವಿವೇಚನೆ ಇಲ್ಲದವರು ಎಂದು ಹೇಳಬಹುದು. ಅದು ಸಂಸದೀಯ ಪದ.
ಅರ್ಕಾವತಿ ಬಗ್ಗೆ ಕುಮಾರ-ಸಿದ್ದು ಜಟಾಪಟಿ
ಸಿದ್ದು: ಕಾನೂನು ಬಿಟ್ಟು ಯಾವುದೇ ಡಿನೋಟಿಫಿಕೇಷನ್ ಮಾಡಿಲ್ಲ.
ಎಚ್‍ಡಿಕೆ: ಕಾನೂನು ಬಿಟ್ಟೇ ಎಲ್ಲ ಮಾಡಿರೋದು.
ಸಿದ್ದು: ಅದು ನಿಮ್ಮ ಕಾಲದಲ್ಲಿ ಆಗಿರೋದು. ಕಾನೂನು ಬಿಟ್ಟು ಮಾಡಿದ್ದೀರ.
ಎಚ್‍ಡಿಕೆ: ನಾನು ದಾಖಲಾತಿ ಇಟ್ಟುಕೊಂಡು ಬಂದಾಗ, ಕತೆ ಕಟ್ಟಿದ್ರಾಲ್ಲಾ. ಮಾತಾಡಕ್ಕೆ ಅವಕಾಶ ಕೊಡಲಿಲ್ಲ.
ಸಿದ್ದು: ಆಯೋಗ ರಚಿಸಿದ್ದೀವಲ್ಲಾ, ಅಲ್ಲಿ ಹೋಗಿ ಕೊಡ್ರಿ ದಾಖಲೆನಾ?
ಎಚ್‍ಡಿಕೆ: ಅವರು ತನಿಖೆ ನಡೆಸಲು ಎಷ್ಟು ವರ್ಷ ಬೇಕು?
ಸಿದ್ದು: ಆರು ತಿಂಗಳು ಕೊಟ್ಟಿದ್ದೇವೆ. ಮತ್ತೆ ಕೇಳಿದ್ದಾರೆ, ಕೊಡ್ತೀವಿ.
ಎಚ್‍ಡಿಕೆ: ದಾಖಲೆಗಳನ್ನು ಬುಕ್ ಮಾಡಿದ್ದೀನಲ್ಲಾ, ಅದೇನು ತೆವಲಿಗೆ ಮಾಡಿಲ್ಲ.
ಸಿದ್ದು: ನೀವೇ ಎಲ್ಲ ಅಕ್ರಮ ಡಿನೋಟಿಫಿಕೇಷನ್ ಮಾಡಿರೋದು., ನೀವೇ ಮಾಡಿರೋದು.
ಎಚ್‍ಡಿಕೆ: ನಾವೆಲ್ಲೂ ಮಾಡಿಲ್ಲ. ಬೇಕಾದ್ರೆ ಯಾವುದೇ ತನಿಖೆಗೆ ಸಿದ್ಧ. ಇಲ್ಲಿ ಚರ್ಚೆಗೆ ಸಿದ್ಧನಾ ?ಚರ್ಚೆಗೆ ಅವಕಾಶ ಕೊಡದೆ ಎಲ್ಲ ಮುಚ್ಚಿಡುತ್ತಿದ್ದೀರಾ?
ಸಿದ್ದು: ನೀವೇ ಮಾಡಿರೋದು, ನಾವು ಮಾಡಿಲ್ಲ. ಚರ್ಚೆಗೆ ತಯಾರು.
ಎಚ್‍ಡಿಕೆ: ಮುಂದಿನ ಬಜೆಟ್ ಸೆಷನ್‍ನಲ್ಲಿ ನನಗೆ ಅವಕಾಶ ಕೊಡಿ ಸ್ಪೀಕರ್ ಅವರ್ರೇ. ನಾನು ಕೈಮುಗಿದು ಕೇಳುತ್ತೇನೆ. ಅಕ್ರಮ ಇವರು
ಮಾಡಿದ್ದಾರೋ ಅವರು ಮಾಡಿದ್ದಾರೋ ಬಿಚ್ಚಿಡುತ್ತೇನೆ.
ಸಿದ್ದು: ಏನಿದ್ದರೂ ಕೆಂಪಣ್ಣ ಆಯೋಗಕ್ಕೆ ಕೊಟ್ಟು ಬನ್ರೀ... ಇಲ್ಲಿ ತೀರ್ಮಾನ ಆಗೋಕೆ ಸಾಧ್ಯ ಇಲ್ಲ. ಅಲ್ಲಿ ಕೊಡ್ರಿ ಹೋಗ್ರೀ.
ಎಚ್‍ಡಿಕೆ: ಚರ್ಚೆಗೆ ಅವಕಾಶ ಮಾಡಿಕೊಡಿ ಅಧ್ಯಕ್ಷರೇ?
ಸಿದ್ದು: ಇಲ್ಲಿ ಚರ್ಚೆ ಆಗಿದೆ, ಕುಳಿತುಕೊಳ್ರೀ...
ಎಚ್‍ಡಿಕೆ: ಚರ್ಚೆ ಆಗಿಲ್ಲ, ಅವಕಾಶ ಕೊಡಲಿಲ್ಲ.
ಸಿದ್ದು: ಇಲ್ಲಿ ಚರ್ಚೆ ಆಗಿದ್ದಕ್ಕೇ ಆಯೋಗ ರಚಿಸಿದ್ದು, ಆಗ ಸುಮ್ಮನಿದ್ರೀ.
ನೀವು ಹೇಳಿದಾಗ ಎಲ್ಲ ಚರ್ಚೆಗೆ ಕೊಡೋಕೆ ಸಾಧ್ಯ ಇಲ್ಲ.
ಎಚ್‍ಡಿಕೆ: ಶೆಟ್ಟರ್ ಮಾತನಾಡುವಾಗ ದಾಖಲಾತಿ ಕೊಟ್ಟುಬಿಡಿ ನಾವು ಹೋರಾಟ ಮಾಡುತ್ತೇವೆ ಎಂದು
ರಮೇಶ್‍ಕುಮಾರ್ ಹೇಳಿದ್ರು. ನಾನು ಕೊಡುತ್ತೇನೆ ಹೋರಾಟ ಮಾಡುತ್ತಾರಾ?
ಸಿದ್ದು: ಕೊಡ್ರೀ ಅಲ್ಲಿ, ಆಯೋಗಕ್ಕೆ. ಹಿಂದೆ 150 ಕೋಟಿ ಲಂಚ ಪಡೆದಿದ್ದೀರಾ ಎಂಬ ಆರೋಪ ಬಂದಾಗ ನೀವೇನು ಮಾಡಿದ್ರೀ? ಆಯೋಗ ಮಾಡಿದ್ದು ತಾನೇ? ಆಮೇಲೆ ಏನಾಯಿತು?
ಎಚ್‍ಡಿಕೆ: ಆ ಆಯೋಗಕ್ಕೆ ಒಂದು ಅರ್ಜಿನೂ ಬರಲಿಲ್ಲ. ಅದಕ್ಕೇ ಆಗಲಿಲ್ಲ. ಅಂದು ನಾನು ಲೋಕಾಯುಕ್ತಕ್ಕೆ ರೆಫರ್ ಮಾಡಿದೆ.
ಅಂದು ಹಾಗೆ ಮಾಡಿದ್ದಕ್ಕೇ ಈ ರಾಜ್ಯದ ಹಣೆಬರಹ ಬದಲಾಗಿದ್ದು. ನೀವು ಅಧಿಕಾರಕ್ಕೆ ಬಂದದ್ದು.
ಸಿದ್ದು: ಆಯ್ತು ಹೋಗಿ, ನಿಮ್ಮಲ್ಲಿ ಏನೇನು ಇದೆ ಅದನ್ನು ಹೋಗಿ ಆಯೋಗಕ್ಕೆ ಕೊಡಿ.
ಎಚ್‍ಡಿಕೆ: ರಿಡೋ ಅಂತಾ ಸಾಕಷ್ಟು ಅಕ್ರಮವಾಗಿಯೇ ಮಾಡಿದ್ದೀರಾ?
ಸಿದ್ದು: ಒಂದಿಂಚೂ ಮಾಡಿಲ್ಲ. ಒಂದಿಂಚೂ ಮಾಡಿಲ್ಲ.
ಎಚ್‍ಡಿಕೆ: ನನ್ನ ಹತ್ರ ಎಲ್ಲ ದಾಖಲೆ ಇದೆ, ತೋರಿಸುತ್ತೇನೆ. ನೋಡ್ರೀರಾ?
ಸ್ಪೀಕರ್ ಮಧ್ಯಪ್ರವೇಶದಿಂದ ಮಾತಿಗೆ ಫುಲ್ ಸ್ಟಾಪ್ ಬಿತ್ತು.
Advertisement