
ಬೆಂಗಳೂರು: ವರ್ತೂರು ಹೋಬಳಿಯ ದೇವರ ಬೀಸನಹಳ್ಳಿ ಬಳಿಯ ಐಟಿ ಪಾರ್ಕ್‌ಗೆ ಸರ್ಕಾರ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಲೋಕಾಯುಕ್ತಕ್ಕೆ ತಮ್ಮ ವಿರುದ್ಧ ದೂರು ನೀಡಿರುವುದು ರಾಜಕೀಯ ಪ್ರೇರಿತ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕಾಸ್ ಟೆಲಿಕಾಂ, ಸುಪ್ರೀಂ ಬಿಲ್ಡ್ ಕ್ಯಾಪ್ ಪ್ರೈ.ಲಿ. ಮತ್ತು ರಾಯಲ್ ಫ್ರ್ಯಾಗ್ರೆನ್ಸ್ ಪ್ರೈ.ಲಿ. ಸಂಸ್ಥೆಗಳಿಗಾಗಿ ಭೂಮಿಯನ್ನು ವಶಪಡಿಸಿಕೊಂಡು ಹಂಚಿಕೆ ಮಾಡಿರುವ ಕುರಿತು ಖಾಸಗಿ ದೂರನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ವಾಸುದೇವ ರೆಡ್ಡಿ ಸಲ್ಲಿಸಿದ್ದಾರೆ. ಇದ್ಕಕೂ ಮುನ್ನ ವಿಷಯಕ್ಕೆ ಸಂಬಂಧಿಸಿದಂತೆ ಅವರ ತಂದೆ ಪಿ.ನಾರಾಯಣಪ್ಪ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ದೂರು ನೀಡಿದ್ದರು. ಎರಡೂ ನ್ಯಾಯಾಲಯಗಳು ಭೂಮಿಯ ವಶಪಡಿಸಿಕೊಳ್ಳುವಿಕೆ ಮತ್ತು ಹಂಚಿಕೆ ಪ್ರಕ್ರಿಯೆ ಎತ್ತಿ ಹಿಡಿಯಲಾಗಿತ್ತು ಎಂದು ವಿವರಿಸಿದರು.
ಈ ದೂರು ಸಂಪೂರ್ಣ ಆಧಾರ ರಹಿತ ಹಾಗೂ ಸತ್ಯಕ್ಕೆ ದೂರವಾಗಿರುವುದು. ವಾಸುದೇವರೆಡ್ಡಿ ಈ ವಿಷಯವನ್ನು ಮುಚ್ಚಿಟ್ಟು ದೂರು ದಾಖಲಿಸಿದ್ದಾರೆ.
ಲೋಕಾಯುಕ್ತ ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆಯುವ ಯತ್ನ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಮಂದಿ ಪ್ರಮುಖ ರಾಜಕಾರಣಿಗಳಿದ್ದಾರೆ. ಅವರೆಲ್ಲರನ್ನೂ ಬಿಟ್ಟು ತಮ್ಮ ಮೇಲೆಯೇ ದೂರು ದಾಖಲಿಸಿರುವುದು ರಾಜಕೀಯ ಪ್ರೇರಿತ. 14 ವರ್ಷದ ಹಳೆಯ ಪ್ರಕರಣವನ್ನು ದುರುದ್ದೇಶದಿಂದ ಕೆದಕಲಾಗಿದೆ. ತಾವು ಯಾವುದೇ ಡಿನೋಟಿಫಿಕೇಷನ್ ಮಾಡಿದ ಭೂಮಿಯನ್ನು ಪಡೆದಿಲ್ಲ. ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಯಾವುದೇ ಲಾಭ ಮಾಡಿಕೊಂಡಿಲ್ಲ ಎಂದು ಹೇಳಿದರು. ಪ್ರಕರಣ ಕುರಿತಂತೆ ಸಚಿವರು ಮಾಧ್ಯಮಗಳಿಗೆ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ.
Advertisement