ಹಾಡಿಯಲ್ಲಿ 27ರಂದು ಆಂಜನೇಯ ವಾಸ್ತವ್ಯ

ಬುಡಕಟ್ಟು ಪಂಗಡದವರಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ `ಹಾಡಿ ಬಾಗಿಲಿಗೆ ರಾಜ್ಯ ಸರ್ಕಾರ' ಎಂಬ ...
ಎಚ್.ಆಂಜನೇಯ
ಎಚ್.ಆಂಜನೇಯ
Updated on

ಬೆಂಗಳೂರು: ಬುಡಕಟ್ಟು ಪಂಗಡದವರಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ `ಹಾಡಿ ಬಾಗಿಲಿಗೆ ರಾಜ್ಯ ಸರ್ಕಾರ' ಎಂಬ ಕಾರ್ಯಕ್ರಮವನ್ನು ಪ್ರತಿ
ತಿಂಗಳು ನಡೆಸಲಾಗುತ್ತಿದ್ದು, ಫೆ .27ರಂದು ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆಯ ಮಾನಂದವಾಡಿ ಸಮೀಪ ಇರುವ ಮಾನೀಮೂಲೆ ಹಾಡಿಯಲ್ಲಿ ವಾಸ್ತವ್ಯ ಮಾಡಲಿದ್ದೇನೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ. ಅಂದು ಅಲ್ಲಿನ ಆದಿವಾಸಿಗಳ ಜತೆಗೆ ಇಡೀ ದಿನ ಕಳೆಯಲು ನಿರ್ಧರಿಸಿದ್ದು, ಅರಣ್ಯ ಸಚಿವ ರಮಾನಾಥ್ ರೈ, ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮತ್ತು ಜಿಲ್ಲಾಡಳಿತ ಭಾಗಿಯಾಗುತ್ತದೆ. ಸ್ಥಳೀಯರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನರ ಜೀವನಕ್ರಮದ ಛಾಯಾಚಿತ್ರ ಮತ್ತು ವಿಡಿಯೋ  ಚಿತ್ರೀಕರಣ ನಡೆಸಿ ಕೆಲವು ಸಂಘಟನೆಗಳು ವಿದೇಶಿ ಹಣ
ತರಿಸಿಕೊಳ್ಳುತ್ತಿವೆ. ಆದರೆ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಶ್ರಮವಹಿಸುತ್ತಿಲ್ಲ. ಇದು ಕಾನೂನು ಬಾಹಿರ. ಇಂಥ ಸಂಘಟನೆಗಳನ್ನು
ಪತ್ತೆ ಹಚ್ಚಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಕಾಡಿನಲ್ಲಿ ಮಾತ್ರವಲ್ಲ ನಾಡಿನಲ್ಲೂ ಇಂಥ ಸಂಘಟನೆಗಳಿವೆ. ಕೆಲ ಸಮುದಾಯದ ಸಮಸ್ಯೆಗಳನ್ನು ಜೀವಂತವಾಗಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇಂಥವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಇನ್ನು ಕೆಲ ಸಂಘಟನೆಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ ಎಂದರು. ಹಾಡಿಗಳಲ್ಲಿ ವಾಸವಿರುವವರು ಸ್ವಯಂ ಪ್ರೇರಣೆಯಿಂದ ಸ್ಥಳಾಂತರಗೊಳ್ಳುವುದಕ್ಕೆ ಸರ್ಕಾರ ನೆರವು ನೀಡುತ್ತದೆ. ಈಗಾಗಲೇ ರು.
10 ಲಕ್ಷ ಪರಿಹಾರ ಪ್ಯಾಕೇಜ್ ಘೋಷಣೆಯಾಗಿದೆ. ಅವರೇನಾದರೂ ಜಮೀನು ಖರೀದಿಸಲು ಬಯಸಿದರೆ ಸರ್ಕಾರದ ವತಿಯಿಂದ ಹೊಂದಾಣಿಕೆ ಅನುದಾನ ನೀಡಲಾಗುವುದು ಎಂದು ಹೇಳಿದರು.
ಏ.11ರಿಂದ ಗಣತಿ: ರಾಜ್ಯದಲ್ಲಿ ಏಪ್ರಿಲ್ 11ರಿಂದ 30ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಆರಂಭಿಲಾಗುವುದು. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ಆಯೋ ಗದ ವತಿಯಿಂದ ಪ್ರತಿ ತಾಲೂಕಿನ 1 ಬ್ಲಾಕ್‍ನಲ್ಲಿ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿವಲಯದಲ್ಲಿ 1 ಕಡೆ ಸೇರಿದಂತೆ 184 ಬ್ಲಾಕ್‍ಗಳಲ್ಲಿ ಪ್ರಾಯೋ ಗಿಕವಾಗಿ  ಫೆ  20ರಿಂದ ಗಣತಿ ಕಾರ್ಯ ನಡೆಸಲಾಗುತ್ತಿದ್ದು, ಸಮೀಕ್ಷೆಯ ಎಲ್ಲ ಕಾಲಂಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಯಾವುದಾದರೂ ದೋಷ ಕಾಣಿಸಿ
ಕೊಂಡರೆಸರಿಪಡಿಸಲಾಗುವುದು ಎಂದರು. ಗಣತಿ ಬಗ್ಗೆ ಸಂಪುಟ ಸದಸ್ಯರಾದ ಸಚಿವ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಅವರ ಜೊತೆ ಮಾತಾಡುತ್ತೇನೆ. ಇದಕ್ಕೆ ಯಾರ ವಿರೋಧವೂ ಇಲ್ಲ. ಜತೆಗೆ ಸಮೀಕ್ಷೆ ಸಂದರ್ಭದಲ್ಲಿ ಉಪಜಾತಿ ಹೆಸರು ನಮೂದಿಸುವುದು ಐಚ್ಛಿಕವೇ ಹೊರತುಕಡ್ಡಾಯವಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com