ಜೆಡಿಎಸ್ ಜಾಗಕ್ಕೆ ಮತ್ತೆ ಸಮಸ್ಯೆ
ಬೆಂಗಳೂರು: ಜೆಡಿಎಸ್ ಕಚೇರಿ ಜಾಗದ ಸಮಸ್ಯೆ ಈಗ ಬಿಬಿಎಂಪಿ ಅಂಗಳದಲ್ಲಿ ಬಂದು ಬಿದ್ದಿದೆ. ಮಲ್ಲೇಶ್ವರ 18ನೇ ಕ್ರಾಸ್‍ನಲ್ಲಿ ಕಚೇರಿ ನಿರ್ಮಿಸಲು ಜಾಗ ಪಡೆದಿದ್ದ ಜೆಡಿ ಎಸ್ ಈಗ ಅದು ಬೇಡ ಮೆಜೆಸ್ಟಿಕ್ ಪಕ್ಕದಲ್ಲಿ ಜಾಗ ನೀಡಿ ಎಂದು ಹೊಸ ಪ್ರಸ್ತಾಪ ಸಲ್ಲಿಸಿದೆ. ಇದನ್ನಾಧರಿಸಿ ಬಿಬಿಎಂಪಿ ಕೂಡ ಈ ಹಿಂದೆ ಜಾಗ ನೀಡಿದ್ದ ನಿರ್ಣಯ ರದ್ದುಗೊಳಿಸಿ, ಮೆಜೆಸ್ಟಿಕ್‍ನ ಕೃಷ್ಣ ಫ್ಲೋರ್ ಮಿಲ್ ಬಳಿಯ ರು. 100ಕೋಟಿ ಮೌಲ್ಯದ ಜಾಗ ನೀಡಲು ಮುಂದಾಗಿದೆ. ಸುಭಾಷ್‍ನಗರ ವಾರ್ಡ್ ವ್ಯಾಪ್ತಿಯ ಕೃಷ್ಣಫ್ಲೋರ್ ಮಿಲ್ ಜಾಗವನ್ನು (1.10ಎಕರೆ) ಪಕ್ಷದ ಕಚೇರಿ ನಿರ್ಮಿಸಲು 5 ವರ್ಷಗಳ ಅವಧಿಗೆ ಸರ್ಕಾರಿ ಮಾರ್ಗಸೂಚಿ ದರದಂತೆ ನೀಡಬೇಕೆಂದು ಜೆಡಿಎಸ್ ಕೋರಿಕೆ ಸಲ್ಲಿಸಿದೆ. ಅಷ್ಟೇ ಅಲ್ಲ. ಈ ಜಾಗವನ್ನು ತುರ್ತು ಗುತ್ತಿಗೆ ಆದಾರದ ಮೇಲೆ ಮಂಜೂರು ಮಾಡಿಕೊಡಬೇಕೆಂದೂ ಪಕ್ಷದ ಮುಖಂಡರು ವಿನಂತಿಸಿದ್ದಾರೆ . ಇದನ್ನಾಧರಿಸಿ ಸ್ವತಃ ಆಯುಕ್ತ ಲಕ್ಷೀ ಮೀನಾರಾಯಣ ಅವರೇ ಹೊಸ ಪ್ರಸ್ತಾಪ ಸಿದ್ಧ ಪಡಿಸಿದ್ದು, ಗುರುವಾರ ನಡೆಯುವ ಕೌನ್ಸಿಲ್ ಸಭೆಯಲ್ಲಿ ಮಂಡಿಸಲು ಟಿಪ್ಪಣಿಯನ್ನೂ ಮಂಡಿಸಿದ್ದಾರೆ. ಈ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗುವುದಕ್ಕೂ
ಮುನ್ನವೇ ಜೆಡಿಎಸ್‍ಗೆ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಬಿಜೆಪಿಯ ಕೆಲವು ಸದಸ್ಯರು ಪರೋಕ್ಷವಾಗಿವಿರೋಧಿಸಿದರೆ, ಕಾಂಗ್ರೆಸ್‍ನ ಮಲ್ಲೇಶ್ ಸೇರಿದಂತೆ ಗಾಂಧೀನಗರದ ಕೆಲವು ಸದಸ್ಯರು ಸ್ಲಂ ನಿವಾಸಿಗಳ
ಕಲ್ಯಾಣಕ್ಕಾಗಿ ಮೀಸಲಿಟ್ಟ ಈ ಜಾಗವನ್ನು ಯಾವುದೇ ಕಾರಣಕ್ಕೂ ರಾಜಕೀಯ ಉದ್ದೇಶಕ್ಕೆ ನೀಡಬಾರದು ಎಂದು ಹೇಳಿದ್ದಾರೆ.
ಜಾಗ ನೀಡಿದರೆ ಉಗ್ರ ಹೋರಾಟ-ಮಲ್ಲೇಶ್
ಸ್ಲಂ ನಿವಾಸಿಗಳಿಗೆ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುತ್ತಿರುವ ಈ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಸ್ಥಳೀಯ ಕಾರ್ಪೋರೇಟರ್ ಮಲ್ಲೇಶ್ ವಿರೋಧ ವ್ಯಕ್ತ ಪಡಿಸಿದ್ದಾರೆ. ಬಹುವರ್ಷಗಳ ನಂತರ ಬಿಬಿಎಂಪಿ ವಶಕ್ಕೆ ಸಿಕ್ಕಿರುವ ಈ ಜಾಗದ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಸ್ಲಂ ನಿವಾಸಿಗಳಿಗೆ ಸುಮಾರು ರು. 9ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ ಯೋ ಜನೆಯನ್ನೂ ರೂಪಿಸಲಾಗಿದೆ. ಸದ್ಯದಲ್ಲೇ ಕಾಮಗಾರಿಯೂ ಆರಂಭವಾಗಲಿದೆ. ಇಂಥ ಸಂದರ್ಭದಲ್ಲಿ ಬಡವರಿಗೆ ಇರುವ ಜಾಗವನ್ನು ರಾಜಕೀಯ ಪಕ್ಷಕ್ಕೆ ನೀಡುವುದು ಸರಿಯಲ್ಲ. ವಿರೋಧದ ನಡುವೆಯೂ ಬಿಬಿಎಂಪಿ ಈ ಜಾಗ ನೀಡಲು
ತೀರ್ಮಾನಿಸಿದರೆ, ಸ್ಲಂ ನಿವಾಸಿಗಳ ಜತೆಗೂಡಿ ಹೋರಾಟ ನಡೆಸಲಾಗುವುದು ಎಂದು ಸುದ್ದಿಗಾರರಿಗೆ ಹೇಳಿದ್ದಾರೆ. ಕೃಷ್ಣ ಫ್ಲೋರ್ ಮಿಲ್ ಸಂಸ್ಥೆ ಸರ್ಕಾರದಿಂದ ಪಡೆದಿದ್ದ ಭೋಗ್ಯದ ಅವಧಿ 2007ರಲ್ಲೇ ಮುಗಿದಿತ್ತು.ಆದರೂ ಜಾಗವನ್ನು ಬಿಬಿಎಂಪಿ ವಶಕ್ಕೆ ನೀಡಿರಲಿಲ್ಲ. ಇದನ್ನು ತಿಳಿದು ನಾನು ಬಿಬಿಎಂಪಿಯ ಆಸ್ತಿ ಸಂರಕ್ಷಣಾ ಸಮಿತಿ ಗಮನಕ್ಕೆ ತಂದು ಆಸ್ತಿ ರಕ್ಷಣೆ ಮಾ ಡಿದ್ದೇನೆ. ಆದ್ದರಿಂದ ಆಯುಕ್ತರು, ಮೇಯರ್ ಅವರು ಈ ಜಾಗವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ನೀಡಬಾರದು ಎಂದು ಮಲ್ಲೇಶ್ ಒತ್ತಾಯಿಸಿದ್ದಾರೆ.