ನಿರ್ಗತಿಕರಿಗೆ ಲಕ್ಷ ಮನೆ: ಸಚಿವ ಆಂಜನೇಯ ಭರವಸೆ

2015-16ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಗೆ ಮಂಜೂರಾಗುವ...
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ

ಬೆಂಗಳೂರು: ಮುಂದಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಘಟಕ ಯೋಜನೆಯಲ್ಲಿ ನಿರ್ಗತಿಕರಿಗೆ 1 ಲಕ್ಷ ಮನೆ ನಿರ್ಮಿಸಿಕೊಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

2015-16ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಗೆ ಮಂಜೂರಾಗುವ ಹಣದಲ್ಲಿ ರೂಪಿಸಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು 32 ಇಲಾಖೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರೂ.2 ಲಕ್ಷ ವೆಚ್ಚದಲ್ಲಿ ಒಂದು ಮನೆ ನಿರ್ಮಿಸಲಾಗುವುದು.

ಬೀದಿ ಬದಿಯಲ್ಲಿ ವಾಸಿಸುವವರು, ಮೋರಿ, ಮರದ ಕೆಳಗೆ ಜೋಪಡಿ ಹಾಕಿಕೊಂಡು ಬದುಕುವವರು ಇದರ ಫಲಾನುಭವಿಗಳು. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಪ್ರತ್ಯೇಕ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

ಈ ಯೋಜನೆಗೆ ರೂ.2000 ಕೋಟಿ ವ್ಯಯವಾಗುತ್ತದೆ. ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಶನ್ ಮೂಲಕ ನಿರ್ಮಿಸುವ ಮನೆಗಳಿಗಿಂತ ತುಸು ವೆಚ್ಚ ಹಣ ಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ ರಾಜ್ಯ ಪರಿಷತ್‌ನಲ್ಲಿ ಈ ಬಗ್ಗೆ ಒಪ್ಪಿಗೆ ಪಡೆಯಲಾಗುವುದು ಎಂದರು.

ಪರಿಶಿಷ್ಟರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಐಟಿಐ ವಿದ್ಯಾರ್ಥಿಗಳಿಗೆ ಕಲಿಕೆಗೆ ಅಗತ್ಯವಾದ ಸಾಮಾಗ್ರಿಗಳು ಇರುವ ರೂ.13,000 ಮೊತ್ತದ ಕಿಟ್ ನೀಡಲಾಗುವುದು. ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವ್ಯಾಸಾಂಗ ಮಾಡುವ ದಲಿತ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲ್ಯಾಪ್‌ಟಾಪ್ ನೀಡಲಾಗುವುದು ಎಂದರು.

ಮೀಸಲು ಕ್ಷೇತ್ರಕ್ಕೆ ನಿಧಿ: ಇದರ ಜತೆಗೆ ವಿಶೇಷ ಘಟಕ ಯೋಜನೆ ಹಣ ಇತರೆ ವರ್ಗದವರಿಗೂ ಲಭಿಸುವುದಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಹಿನ್ನೆಲೆಯಲ್ಲಿ ರಾಜ್ಯದ 54 ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೂ ಹಣ ನೀಡಲಾಗುವುದು.

ಕಿಡ್ನಿ ಸಮಸ್ಯೆ ಇರುವವರಿಗೆ ನೆರವಾಗಲು ಡಯಾಲಿಸಿಸಿ ಕೇಂದ್ರ ತೆರೆಯಲಾಗುವುದು. ಪರಿಶಿಷ್ಟರ ಉಪಯೋಜನೆ ಹಣ ಎಲ್ಲರಿಗೂ ಲಭಿಸಬೇಕು ಎಂಬುದು ಇದರ ಉದ್ದೇಶ ಎಂದು ಹೇಳಿದರು.

ಇನ್ನು ಮುಂದೆ ವಿಶೇಷ ಘಟಕ ಯೋಜನೆ ಹಣವನ್ನು ಮೂಲ ಸೌಕರ್ಯ ಕ್ಷೇತ್ರಕ್ಕೆ ನೀಡುವುದಿಲ್ಲ. ಕಳೆದ ಸಾಲಿನಲ್ಲಿ ಮೆಟ್ರೊ ಕಾಮಗಾರಿಗೆ ರೂ.85 ಕೋಟಿ, ಕೆಎಸ್‌ಆರ್‌ಟಿಸಿಗೆ ರೂ.35 ಕೋಟಿ ಸೇರಿದಂತೆ ಶೇ.15ರಷ್ಟು ಹಣ ನೀಡಲಾಗಿದೆ. ಇನ್ನು ಮುಂದೆ ಆ ಸೌಲಭ್ಯ ಕಡಿತಗೊಳಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com