ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಶೆಡ್‌ಗೆ ಬಂದು ನಿಂತ ಜೆಡಿಎಸ್ ಕಚೇರಿ!

ಜಾತ್ಯತೀತ ಜನತಾದಳದ ಕಚೇರಿ 'ಶೆಡ್‌'ಗೆ ಬಂದು ನಿಂತಿದೆ. ಅದೂ ಮತ್ತೊಂದು ವಿವಾದದ ಸ್ಥಳದಲ್ಲಿ...

ಬೆಂಗಳೂರು: ಜಾತ್ಯತೀತ ಜನತಾದಳದ ಕಚೇರಿ 'ಶೆಡ್‌'ಗೆ ಬಂದು ನಿಂತಿದೆ. ಅದೂ ಮತ್ತೊಂದು ವಿವಾದದ ಸ್ಥಳದಲ್ಲಿ.

ಸುಪ್ರೀಂಕೋರ್ಟ್‌ನ ಅಂತಿಮ ಆದೇಶದಂತೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಚೇರಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಕೆಲಸಕ್ಕೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ ದೇವೇಗೌಡರು ಮಂಗಳವಾರ ಮಧ್ಯಾಹ್ನ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕಚೇರಿಯ ಹಿಂಭಾಗದಲ್ಲೇ ಇರುವ ವಿವಾದಿತ ಜಾಗದಲ್ಲಿ ದಿಢೀರ್ ಶೆಡ್ ನಿರ್ಮಿಸಿ ತಾತ್ಕಾಲಿಕವಾಗಿ ಪಕ್ಷ ಕಚೇರಿಯನ್ನು ಅಲ್ಲಿ ಸ್ಥಾಪಿಸಲೂ ಕಾಮಗಾರಿ ಆರಂಭಿಸಲಾಯಿತು.

ಜೆಡಿಎಸ್ ಕಚೇರಿಗೆ ವೈಯಾಲಿಕಾವಲ್‌ನಲ್ಲಿ ಜಾಗ ನೀಡಿ ಬಿಬಿಎಂಪಿ ನಿರ್ಣಯ ಕೈಗೊಂಡಿತ್ತು. ಆದರೆ ಈ ಭೂಮಿ ವಿವಾದ  ಹೈಕೋರ್ಟ್ ಮೆಟ್ಟಿಲೇರಿದ್ದು, ಅದಕ್ಕೆ ತಡೆಯಾಜ್ಞೆ ಇದೆ. ಹೀಗಾಗಿ, ಜೆಡಿಎಸ್ ತನ್ನ ಕಚೇರಿಯನ್ನು ಬೀದಿಗಿಳಿಸಲು ಮುಂದಾಗಿದೆ. ಈಗಿರುವ ಜೆಡಿಎಸ್ ಕಚೇರಿಯ ಹಿಂಭಾಗದಲ್ಲಿರುವ ನಿವೇಶದನಲ್ಲೇ ತಾತ್ಕಾಲಿಕ ಶೆಡ್ ಹಾಕಿ ಅಲ್ಲಿಂದಲೇ ಕಾರ್ಯನಿರ್ವಹಿಸಲು ದೇವೇಗೌಡರು ನಿರ್ಧರಿಸಿ, ಭೂಮಿ ಸಮತಟ್ಟುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಆದರೆ, ಈ ಭೂಮಿಯೂ ವಿವಾದದಲ್ಲಿದ್ದು, ಕೋರ್ಟ್‌ನಿಂದ ಯಥಾಸ್ಥಿತಿ ಕಾಪಾಡುವ ಆದೇಶದಲ್ಲಿದೆ. ಹೀಗಾಗಿ ಇಲ್ಲಿ ನೆಲ ಸಮತಟ್ಟು ಮಾಡಿ, ಶೆಡ್ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ. ಮತ್ತೊಂದೆಡೆ ಈಗಿರುವ ಕಚೇರಿಯಲ್ಲಿ ಎಲ್ಲವನ್ನೂ ಗಂಟುಮೂಟೆ ಕಟ್ಟುವ ಕಾರ್ಯವೂ ನಡೆಯುತ್ತಿದೆ.

ಮಠದಿಂದ ಆಕ್ಷೇಪ: ಈ ಶೆಡ್ ನಿರ್ಮಾಣದ ಪ್ರಯತ್ನಕ್ಕೆ ವೀರಶೈವ ಸಮುದಾಯಕ್ಕೆ ಸೇರಿದ ಶಿವಮೊಗ್ಗದ ರಾಮಲಿಂಗೇಶ್ವರ ಮಠದ ವಕೀಲರಿಂದ ಆಕ್ಷೇಪ ವ್ಯಕ್ತವಾಗಿದೆ. ಮಠದ ಪರ ವಕೀಲರು ಸಂಜೆ ವೇಳೆಗೆ ಆ ಜಾಗ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ನೀಡಿರುವ ಆದೇಶದ ಪ್ರತಿ ಜೆಡಿಎಸ್ ಕಾರ್ಯಾಧ್ಯಕ್ಷ ನಾರಾಯಣರಾವ್ ಅವರಿಗೆ ಕೊಟ್ಟು ಯಾವುದೇ ಕಾಮಾಗಾರಿ ಮಾಡದಂತೆ ತಾಕೀತು ಮಾಡಿದರು.

ಬ್ರಿಟಿಷರ ಕಾಲದಲ್ಲಿ ಶಿವಮೊಗ್ಗ ತಾಲೂಕು ಹಾರ್ನಹಳ್ಳಿಯ ರಾಮಲಿಂಗೇಶ್ವರ ಮಠಕ್ಕೆ ಈ ಭೂಮಿ ಮುಂಜೂರಾಗಿತ್ತು. 2013ರಲ್ಲಿ ಜೆಡಿಎಸ್ ಚುನಾವಣೆ ಸಂದರ್ಭವಾದ್ದರಿಂದ ವಾಹನ ನಿಲುಗಡೆಗೆ ಅವಕಾಶ ಕೊಡಬೇಕು ಎಂದು ಕೋರಿತ್ತು. ವಿವಾದ ಕೋರ್ಟ್‌ನಲ್ಲಿ ಇದ್ದರಿಂದ ಒಪ್ಪಿಗೆ ಕೊಟ್ಟಿರಲಿಲ್ಲ. ಮಠದ ಜಾಗವಾದ್ದರಿಂದ ಖಾತೆ ಮಾಡಿಕೊಡುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದೆವು. ಜೆಡಿಎಸ್ ಸಹ ಪ್ರತಿವಾದಿಯಾಗಿತ್ತು. ವಿಚಾರಣೆ ಸಂದರ್ಭದಲ್ಲಿ 6 ತಿಂಗಳ ನಂತರ ವಕ್ತಾರ ರಮೇಶ್ ಬಾಬು ಜೆಡಿಎಸ್‌ಗೆ ಸೇರಿದ್ದು ಎಂದು ಆಕ್ಷೇಪಣೆ ಸಲ್ಲಿಸಿದ್ದರು. ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದೆ. ಶೆಡ್ ನಿರ್ಮಾಣ ಕಾರ್ಯ ಆರಂಭವಾದರೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಮಠದ ಪರ ವಕೀಲ ರಾಜಣ್ಣ ಹೇಳಿದರು.

ಸೋನಿಯಾಗೆ ಪತ್ರ
ನಾನು ನ್ಯಾಯಾಂಗವನ್ನು ಗೌರವಿಸುತ್ತೇನೆ. ಸುಪ್ರೀಂಕೋರ್ಟ್ ಆದೇಶದಂತೆ ಈ ಕಚೇರಿಯನ್ನು ಬಿಟ್ಟುಕೊಡಲಾಗುತ್ತಿದೆ. ಕಚೇರಿಗೆ ಜಾಗ ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಪತ್ರ ಬರೆಯುತ್ತೇನೆ. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರೊಂದಿಗೂ ಮಾತನಾಡಲು ಯತ್ನಿಸಿದೆ. ಸಾಧ್ಯವಾಗಿಲ್ಲ. ತಾತ್ಕಾಲಿಕವಾಗಿ ಇಲ್ಲಿ ಶೆಡ್ ನಿರ್ರ್ಮಿಸಲಾಗುತ್ತಿದ್ದು, ಜಾಗ ನೀಡಿದ ಮೇಲೆ ಅಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸುದ್ದಿಗಾರರಿಗೆ ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com