ಸಚಿವರಿಗೇ ಗೊತ್ತಿಲ್ಲದ ಆದೇಶ!

`ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಒಂದು ತಿಂಗಳ ರಜೆ ಮೇಲೆ ತೆರಳಿದ್ದಾರೆ...
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ

ಬೆಂಗಳೂರು: `ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಒಂದು ತಿಂಗಳ ರಜೆ ಮೇಲೆ ತೆರಳಿದ್ದಾರೆ, ಆರ್‍ಟಿಇ ಆನ್‍ಲೈನ್
ಅರ್ಜಿ ವಿಚಾರ ನನ್ನೊಂದಿಗೆ ಚರ್ಚಿಸಿಯೇ  ಇಲ್ಲ. ಇವತ್ತು ಬಗೆಹರಿಸೋಣ ಎಂದರೆ ಆಯುಕ್ತರು ರಜೆಯಲ್ಲಿದ್ದಾರೆ' ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಬಗ್ಗೆ
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ವ್ಯಕ್ತಪಡಿಸಿದ ಅಭಿಪ್ರಾಯವಿದು. ಶಿಕ್ಷಣ ಹಕ್ಕು ಕಾಯಿದೆಯ ಮೀಸಲು ಆನ್‍ಲೈನ್
ಅರ್ಜಿ ಸಲ್ಲಿಕೆ ಗೊಂದಲದ ಬಗ್ಗೆ ಪ್ರಶ್ನಿಸಿದಾಗ ಪ್ರಾಮಾಣಿಕವಾಗಿ ಸಚಿವರು ಈ ಉತ್ತರ ನೀಡಿದ್ದಾರೆ.
ಆಯುಕ್ತರು ಏಕಾಏಕಿ ಈ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಆದಾಗ್ಯೂ ನನಗೆ ಬಂದ ದೂರುಗಳನ್ನು ಪರಿಗಣಿಸಿ ಈ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಕಿಮ್ಮನೆ ಹೇಳಿದ್ದಾರೆ. ಈ ಮೂಲಕ ಮೊದಲ ಬಾರಿಗೆ ತಮ್ಮ ಇಲಾಖೆ ಹಿರಿಯ ಅಧಿಕಾರಿಗಳ ಕಾರ್ಯನಡತೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಖತ್ರಿ ಅವರು ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದಕ್ಕಿಂತ ದೀರ್ಘ ರಜೆಯ ಮೇಲೆ ತೆರಳಿದ್ದೆ ಹೆಚ್ಚು. ಈ ಬಗ್ಗೆ ಸಚಿವರನ್ನು ಹಿಂದೆ ಪ್ರಶ್ನಿಸಿದಾಗಲೆಲ್ಲ ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ ಮೊದಲ ಬಾರಿಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಪದವಿಪೂರ್ವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣ,ಮಾದರಿ ಶಾಲೆಗಳ ನಿರ್ಮಾಣ, ಶಿಕ್ಷಕರ ವರ್ಗಾವಣೆ ನಿಯಮ, ಶಿಕ್ಷಕರ ನೇಮಕ ವಿಳಂಬ, ಸಮವಸ್ತ್ರ  ವಿತರಣೆಯಲ್ಲಿನ ಗೊಂದಲ ಹಾಗೂ ಆರ್‍ಟಿಇ ಗಲಾಟೆಯನ್ನು ತಮ್ಮ ವೈಫಲ್ಯವಲ್ಲವೇ ಎನ್ನುವುದಕ್ಕೆ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ ಎಂದಷ್ಟೇ ಸಚಿವರು ಹೇಳಿದರು.
ಪಠ್ಯವಸ್ತು ಪರಿಷ್ಕರಣಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಸಚಿವ ಕಿಮ್ಮನೆ, ಸಚಿವನಾದ ಒಂದೂವರೆ ವರ್ಷದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಯಲ್ಲಿ ಪರಿಶೀಲನಾ ಸಭೆ ನಡೆಸಿದ್ದೇನೆ. ಸಾರ್ವಜನಿಕರು ನನ್ನ ಆಡಳಿತದ ಬಗ್ಗೆ ಸಮಾಧಾನ ಹೊಂದಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಮಾತ್ರ `ಅಸಮರ್ಥ' ಎಂದು ಹೇಳಲಾಗುತ್ತಿದೆ. ಆದರೆ ನನ್ನ ಇಲಾಖೆಯಲ್ಲಿನ ಕಡತ ವಿಲೇವಾರಿಯು ನನ್ನ ಸಾಮರ್ಥ್ಯವನ್ನು ಸಾಬೀತು ಮಾಡುತ್ತದೆ ಎಂದು ತಿಳಿಸಿದರು.

ಆರ್‍ಟಿಇ ಗೊಂದಲಕ್ಕೆ ಪರಿಹಾರ: ಆರ್‍ಟಿಇ ಆನ್‍ಲೈನ್ ಅರ್ಜಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಆಯುಕ್ತರೊಂದಿಗೆ ಸಭೆ ನಡೆಸಿ ಸೂಕ್ತ ಪರಿಹಾರ ನೀಡಲಾಗುವುದು. ವಿದ್ಯಾರ್ಥಿಗಳು ಆತಂಕಗೊಳ್ಳುವ ಅಗತ್ಯವಿಲ್ಲ. ನೆರೆಹೊರೆ ಶಾಲೆ, ಆನ್‍ಲೈನ್ ಅರ್ಜಿ ಗೊಂದಲ ಸೇರಿದಂತೆ ಇತರ ವಿಚಾರಗಳಲ್ಲಿನ ಸಮಸ್ಯೆಗಳು ನನ್ನ ಗಮನಕ್ಕೂ ಬಂದಿವೆ. ಗೊಂದಲ ಬಗೆಹರಿಸಿ ಅಗತ್ಯಬಿದ್ದಲ್ಲಿ ಅರ್ಜಿ ಸಲ್ಲಿಕೆ ಸಮಯ ವಿಸ್ತರಿಸಲು ಚಿಂತಿಸಲಾಗುವುದು. ಸರ್ಕಾರಕ್ಕೆ ಈ ಬಗ್ಗೆ ಕಾಳಜಿಯಿದೆ ಎಂದು ಕಿಮ್ಮನೆ ಹೇಳಿದರು.
ಅನಧಿಕೃತ ಶಾಲೆಗಳನ್ನು ಆರ್‍ಟಿಇ ಅರ್ಜಿಯಲ್ಲಿ ಸೇರಿಸಲಾಗಿರುವ ಬಗ್ಗೆ ಸ್ಪಷ್ಟ ಉತ್ತರ ನೀಡದ ಸಚಿವರು, ಎರಡೂ ಕಡೆ ಬರುವುದು ಸರಿಯಲ್ಲ. ಈ
ಬಗ್ಗೆ ಇಲಾಖೆಯೊಂದಿಗೆ  ಚರ್ಚಿಸುತ್ತೇನೆ. ಕೆಲ ವಿಚಾರಗಳು ಕೋರ್ಟ್‍ಗೆ ಹೋಗಿರುವುದರಿಂದ ಗೊಂದಲ ನಿರ್ಮಾಣವಾಗಿದೆ. ಪಾಲಕರಲ್ಲಿ ಗೊಂದಲ ಸೃಷ್ಟಿಯಾಗದಂತೆ ಅಧಿ ಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com