
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಅನುಮತಿ ಕೇಳಲು ಬಿಜೆಪಿಗೆ ಶುಕ್ರವಾರವೂ ಮುಹೂರ್ತ ಕೂಡಿಬಂದಿಲ್ಲ. ಕಳೆದ ಮೂರು ದಿನದಿಂದ ರಾಜಭವನಕ್ಕೆ ಹೋಗುತ್ತೇವೆ ಎಂದು ಹೇಳಿಕೊಂಡು ಬರುತ್ತಿರುವ ಬಿಜೆಪಿ ಮುಖಂಡರು ಶುಕ್ರವಾರವೂ ಸುಳಿಯಲಿಲ್ಲ. ಮತ್ತೊಂದೆಡೆ ತಮ್ಮ ರಾಗ ಬದಲಿಸಿದ್ದಾರೆ.ಬಿಜೆಪಿ ಕಾನೂನು ಘಟಕದಿಂದ ದೂರು ಸಲ್ಲಿಸುತ್ತೇವೆ ಎಂದು ಹೇಳಿದ್ದ ಬಿಜೆಪಿ ಈಗ ಅಧಿಕೃತವಾಗಿ ಗುರುತಿಸಿಕೊಳ್ಳಲು ಹಿಂದೇಟುಹಾಕಿದೆ. ದೂರಿಗೂ ತಮಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ಬಿಜೆಪಿ ಬೆಂಬಲಿತ ವಕೀಲ ನಟರಾಜ್ ಶರ್ಮಾ ಎಂಬುವರು ಶನಿವಾರ ರಾಜಭವನಕ್ಕೆ ತೆರಳಲಿದ್ದು, ಕ್ರಿಮಿನಲ್ ವಿಚಾರಣೆಗೆ ಅನುಮತಿ ಕೇಳಲಿದ್ದಾರೆ.
ಪಕ್ಷದಿಂದಲೇ ದೂರು ನೀಡುವುದಾಗಿ ಆರಂಭದ ದಿನಗಳಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ ರಾಜ್ಯಪಾಲರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಬಂದಿದ್ದ ಉಭಯ ನಾಯಕರು ಪಕ್ಷದ ವತಿಯಿಂದ ದೂರು ನೀಡುತ್ತಿಲ್ಲ. ಆದರೆ,ಖಾಸಗಿ ವ್ಯಕ್ತಿ ಯೊಬ್ಬರು ದೂರು ನೀಡುತ್ತಿದ್ದು, ಪಕ್ಷದ ಕಾನೂನು ಘಟಕ ನೆರವು ನೀಡಲಿದೆಯಷ್ಟೇ ಎಂದು ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೆ ವಕೀಲ ನಟರಾಜ್ ಶರ್ಮ ರಾಜ್ಯ ಪಾಲರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಇತ್ತು.
ಆದರೆ ಸಂಜೆ ಐದು ಗಂಟೆಯವರೆಗೂ ರಾಜಭವನದೆದುರು ಮಾಧ್ಯಮ ಪ್ರತಿನಿಧಿಗಳು ಕಾದರೇ ಹೊರತು ದೂರುದಾರ ನಟರಾಜ್ ಶರ್ಮಾ ಸುಳಿಯಲಿಲ್ಲ. ಹುಟ್ಟುಹಬ್ಬ ವಿವಾದ ಬೇಡ: ರಾಜ್ಯಪಾಲರ ಭೇಟಿಗಾಗಿ ಭೇಟಿಗಾಗಿ ಗುರುವಾರ ಸಂಜೆಯಿಂದ ರಾಜಭವನವನ್ನು ವಕೀಲ ನಟರಾಜ್ ಶರ್ಮಾ ಸಂಪರ್ಕಿಸುತ್ತಿದ್ದರೂ ಭೇಟಿಗೆ ಅವಕಾಶ ನೀಡಿಲ್ಲ.
ಹುಟ್ಟುಹಬ್ಬದ ನೆಪದಲ್ಲಿ ಬಿಜೆಪಿ ಮುಖಂಡರು ಶುಕ್ರವಾರ ಬೆಳಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದರಿಂದ ಸಂಜೆ ದೂರು ನೀಡಿದರೆ ರಾಜಕೀಯ ಬಣ್ಣ ಬರುವ ಸಾಧ್ಯತೆಯಿತ್ತು. ಇದರ ಜತೆಗೆ ರಾಜಭವನವು ಬಿಜೆಪಿಗೆ ಯಾವಾಗಲೂ ತೆರೆದಿಲ್ಲ ಎಂಬ ಸಂದೇಶ ರವಾನಿಸಲು ಈ ಕ್ರಮ ಜರುಗಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹುಟ್ಟುಹಬ್ಬದ ದಿನವನ್ನು ರಾಜಕೀಯ ವಿವಾದಕ್ಕೆ ಬಳಸಿಕೊಳ್ಳುವುದು ರಾಜ್ಯಪಾಲರಿಗೆ ಇಷ್ಟವಿರಲಿಲ್ಲ
Advertisement