
ಬೆಂಗಳೂರು: ಕಬ್ಬು ಬೆಳೆಗಾರರ ಹಿತ ಕಾಯಲು ಸಾಧ್ಯವಾಗದ ಕಬ್ಬು ನಿಯಂತ್ರಣ ಮಂಡಳಿಯನ್ನು ಸರ್ಕಾರ ವಿಸರ್ಜಿಸುವುದೇ ಸೂಕ್ತ ಎಂದು ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಕಬ್ಬು ನಿಯಂತ್ರಣ ಮಂಡಳಿಯ ತಪ್ಪು ನಿರ್ಣಯದಿಂದಾಗಿ ಹಾವೇರಿ ಕಬ್ಬು ಬೆಳೆಗಾರರು ರು. 660 ಕೋಟಿ ಕಳೆದುಕೊಳ್ಳುವಂತಾಗಿದೆ. ಉತ್ತರ ಕರ್ನಾಟಕದ ಕಾರ್ಖಾನೆಗಳನ್ನು ದಕ್ಷಿಣ ಕರ್ನಾಟಕದ ಕಾರ್ಖಾನೆಗಳ ವ್ಯಾಪ್ತಿಗೆ ಸೇರಿಸಿದೆ. ಹೀಗಾಗಿ ಆಗಿರುವ ಪ್ರಮಾದದಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದರೂ ರಾಜ್ಯ ಸರ್ಕಾರ ಹೊಸ ಕಾರ್ಖಾನೆಗಳಿಗೆ ಮಂಜೂರು ನೀಡಿದೆ. ಇದರಿಂದ ಮತ್ತಷ್ಟು ಸಮಸ್ಯೆಗಳು ಉದ್ಭವವಾಗುವುದರಲ್ಲಿ ಸಂಶಯವಿಲ್ಲ ಎಂದು ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟು ವರ್ಷ ಕಾರ್ಖಾನೆಗಳ ಮಾಲೀಕರೇ ರೈತರಹೊಲಗಳಿಗೆ ಬಂದು ಕಬ್ಬು ಕಡಿದು ಕಾರ್ಖಾನೆಗಳಿಗೆ ಕೊಂಡೊಯ್ಯುವ ನೀತಿ ಇತ್ತು. ಆದರೆ, ಈಗ ರೈತರೇ ಕಬ್ಬು ಕಟಾವು ಮಾಡಿ ಕಾರ್ಖಾನೆಗಳಿಗೆ ಕಳುಹಿಸಬೇಕು ಎಂದು ಹೇಳುತ್ತಿದ್ದಾರೆ. ಪಡೆಯುವ ಹಣದಲ್ಲೂ ರು.700 ಕಡಿಮೆ ಪಡೆಯುವಂತಾಗಿದೆ. 1 ಟನ್‍ಗೆ 95 ಕೆಜಿ ಸಕ್ಕರೆಬರುವುದು ಉತ್ತರ ಕರ್ನಾಟಕದಲ್ಲಿ ಮಾತ್ರ ಎಂದರು.
ಕೇಂದ್ರ ಸರ್ಕಾರ ರಾಜ್ಯದಲ್ಲಿ ಆರಂಭಿಸಲು ಅನುಮತಿ ನೀಡಿರುವ ಸಕ್ಕರೆ ಕಾರ್ಖಾನೆಗಳ ಪೈಕಿ 14 ಬೆಳಗಾವಿ ಜಿಲ್ಲೆಯಲ್ಲೇ ಸ್ಥಾಪನೆಯಾಗಲಿವೆ. ಈ ಪೈಕಿ ಮೂರು ಕಾರ್ಖಾನೆಗಳನ್ನು ಸಚಿವ ಸತೀಶ್ ಜಾರಕಿಹೊಳಿ ಆರಂಭಿಸಲಿದ್ದಾರೆ. ಉಳಿದ 27 ಕಾರ್ಖಾನೆಗಳ ಪೈಕಿ ವಿಜಯಪುರ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಕ್ರಮವಾಗಿ 9, 5 ಮತ್ತು 3 ಕಾರ್ಖಾನೆಗಳು ಆರಂಭಗೊಳ್ಳಲಿವೆ. ಉಳಿದಂತೆ ಧಾರವಾಡ, ಮೈಸೂರು, ಮಂಡ್ಯ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಹೊಸ ಕಾರ್ಖಾನೆಗಳು ತಲೆ ಎತ್ತಲಿವೆ ಎಂದರು. ರೈತರಿಗೇ ಕಾರ್ಖಾನೆ ಬಿಟ್ಟುಬಿಡಿ: ರು.30 ಕೋಟಿ ಕಬ್ಬು ಬಾಕಿಯಿದೆ, ಈ ವರ್ಷದ್ದು ರು.10ರಿಂದ ರು.15 ಕೋಟಿ ಬಾಕಿ ಹಣ ಕೊಡಬೇಕಾಗಿದೆ. ಆದರೆ, ಹಾವೇರಿ ಸಕ್ಕರೆ ಕಾರ್ಖಾನೆಯವರು ಯಾವ ಬಾಕಿಯೂ ಇಲ್ಲವೆಂದು ನಮ್ಮ ಹೇಳಿಕೆಯನ್ನು ಅಲ್ಲಗಳೆಯುತ್ತಿದ್ದಾರೆ. ಒಂದು ವೇಳೆ ಕಾರ್ಖಾನೆಯಲ್ಲಿ ಲಾಭ ಇಲ್ಲವೆಂದಾದರೆ ತಕ್ಷಣವೇ ಕಾರ್ಖಾನೆಯನ್ನು ಬಿಟ್ಟುಹೋಗಿ, ಬಿಡುವ 2 ತಿಂಗಳ ಮುನ್ನ ರೈತರಿಗೆ ತಿಳಿಸಿ ಅವರೇ ಕಾರ್ಖಾನೆಯನ್ನು ಮುಂದುವರಿಸುತ್ತಾರೆ ಎಂದು ಸವಾಲು ಹಾಕಿದರು. ಹೊಸ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದ ಅವರು ಕಳೆದ ಎರಡು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಕೊಡದೇ
ಸರ್ಕಾರಕ್ಕೆ ಬೆದರಿಕೆ ಹಾಕುತ್ತಿವೆ. ಕಾರ್ಖಾನೆಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಕಬ್ಬು ಅರೆಯಲು ಪ್ರಾರಂಭಿಸಬೇಕು ಎಂದರು. ಯುಪಿಎ ಸರ್ಕಾರ ಅಧಿಕಾರದಲ್ಲಿರುವಾಗ ಸಕ್ಕರೆ ಕಾರ್ಖಾನೆಗಳಿಗೆ ರು. 6,200 ಕೋಟಿ ಮತ್ತು ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರು. 6 ಸಾವಿರ ಕೋಟಿ ಬಡ್ಡಿ ರಹಿತ ಸಾಲ ನೀಡಿದರೂ ತಗಾದೆ ತೆಗೆಯುವುದನ್ನು ಬಿಟ್ಟಿಲ್ಲ. ಸರ್ಕಾರ ಕಠಿಣ ಕೈಗೊಳ್ಳುವ ಮೂಲಕ ಕಬ್ಬು ಬೆಳೆಗಾರರ ನೆರವಿಗೆ ಬರುವಂತೆ ಶಿವಾನಂದ ಗುರುಮಠಒತ್ತಾಯಿಸಿದರು.
Advertisement