ಹಾಲಿನ ರಜೆ ಘೋಷಣೆ ಇಲ್ಲ

: ಕಲಬೆರಕೆ ಹಾಲು ಮಾರಾಟ ತಡೆಗೆ ಸರ್ಕಾರ ಕಾನೂನು ತಿದ್ದುಪಡಿ ಮಾಡುವುದಕ್ಕೆ ಚಿಂತನೆ ನಡೆಸಿದ್ದು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಹಾಲಿನ ರಜೆ ...
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ
Updated on

ವಿಧಾನಸಭೆ: ಕಲಬೆರಕೆ ಹಾಲು ಮಾರಾಟ ತಡೆಗೆ ಸರ್ಕಾರ ಕಾನೂನು ತಿದ್ದುಪಡಿ ಮಾಡುವುದಕ್ಕೆ ಚಿಂತನೆ ನಡೆಸಿದ್ದು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಹಾಲಿನ ರಜೆ ಘೋಷಿಸುವುದಿಲ್ಲ ಎಂದು ಪಶುಸಂಗೋಪನೆ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ರಾಜ್ಯದ 13 ಜಿಲ್ಲಾ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ 15000 ಮೆಟ್ರಿಕ್ ಟನ್ ಹಾಲಿನ
ಪುಡಿ ದಾಸ್ತಾನಿರುವ ಹಿನ್ನೆಲೆಯಲ್ಲಿ ಒಕ್ಕೂಟಗಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ನಿಯಮ 69ರ ಅನ್ವಯ ಜೆಡಿಎಸ್‍ನ  ಎ. ಡಿ ರೇವಣ್ಣ , ವೈ. ಎಸ್. ವಿ ದತ್ತ,  ಕೋನ ರೆಡ್ಡಿ  ಅವರು ಪ್ರಸ್ತಾಪಿಸಿದ ಸಾರ್ವಜನಿಕ ಮಹತ್ವದ ತರ್ತು ವಿಚಾರಕ್ಕೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಜಯಚಂದ್ರ ಈ ವಿಷಯ ತಿಳಿಸಿದ್ದಾರೆ. ರಾಜ್ಯದಲ್ಲಿ ಹಾಲಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಲು ಆರಂಭಿಸಿದ ನಂತರ ಉತ್ಪಾದನಾ ಪ್ರಮಾಣ 45 ಲಕ್ಷ ಲೀಟರಿನಿಂದ 72 ಲಕ್ಷ ಲೀಟರ್ ಗೆ ಹೆಚ್ಚಳಗೊಂಡಿದೆ. ಪ್ರತಿ ದಿನ 30 ಲಕ್ಷ ಲೀಟರ್ ಹಾಲನ್ನು ಪರಿವರ್ತನೆಗಾಗಿ ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ರಾಜ್ಯದಲ್ಲಿ ಹಾಲಿನ ಪುಡಿ
ಪರಿವರ್ತನೆಗೆ ಸೂಕ್ತ ಘಟಕಗಳು ಇಲ್ಲದೇ ಇರುವುದರಿಂದ ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಸಾಗಾಣೆ ಮತ್ತು ಪರಿವರ್ತನಾ ವೆಚ್ಚ ಹೆಚ್ಚಾಗಿ ಹಲವು ಹಾಲು
ಒಕ್ಕೂಟಗಳು ನಷ್ಟದಲ್ಲಿವೆ ಎಂದರು. ಈ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿ ಹಾಲಿನ ಪೌಡರ್ ತಯಾರಿಕಾ ಘಟಕ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದೆ. ಚಾಮರಾಜನಗರದಲ್ಲಿ ರು. 200 ಕೋಟಿ ವೆಚ್ಚದಲ್ಲಿ ಘಟಕ ತೆರೆಯಲಾಗಿದೆ. ಮೈಸೂರಿನಲ್ಲಿ ಮತ್ತು ರಾಮನಗರದಲ್ಲಿ ತಲಾ ರು. 200 ಕೋಟಿ ವೆಚ್ಚದಲ್ಲಿ ಪೌಡರ್ ತಯಾರಿಕಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾವಾರು ಬೇಡಿಕೆ ಇರುವ ಸಿಹಿ ಖಾದ್ಯಗಳೂ ಸೇರಿದಂತೆ 60 ವಿವಿಧ ಬಗೆಯ ನಂದಿನಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಹಾಲು ಉದ್ಯಮದ ಹಿತ ಕಾಯುವುದಕ್ಕೆ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಹಾಲಿನ ರಜೆ ಘೋಷಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಕಲಬೆರಕೆ ಹಾಲು: ಈ ಸಂದರ್ಭದಲ್ಲಿ ಹಲವಾರು ಶಾಸಕರು ರಾಜ್ಯದಲ್ಲಿ ಕಲಬೆರಕೆ ಹಾಲು ಹಾಗೂ ಕೃತಕ ಹಾಲಿನ ಹಾವಳಿ ಹೆಚ್ಚುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ಉತ್ತರ ನೀಡಿದ ಜಯಚಂದ್ರ ಆಹಾರ ಭದ್ರತೆ ಕಾಯ್ದೆ ಪ್ರಕಾರ ಆರೋಗ್ಯ ಇಲಾಖೆ ಅಧಿಕಾರಿಗಳಿಗೆಮಾತ್ರ ಅಂಥವರ ವಿರುದ್ಧ ಕ್ರಮ ತೆಗೆದು ಕೊಳ್ಳುವುದಕ್ಕೆ ಅವಕಾಶವಿದೆ. ಆದಾಗಿಯೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಮ್ಮ ಇಲಾಖೆ ಅಧಿಕಾರಿಗಳೇ ಸಂಚಾರ ನಡೆಸಿ ಈ ವ್ಯವಹಾರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಕೆಲವೆಡೆ ಪ್ರಕರಣ ದಾಖಲಾಗಿದೆ. ಹಾಲು ಕಲಬೆರಕೆ ವಿಚಾರವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಕಠಿಣ ಶಿಕ್ಷೆ ನೀಡಬೇಕು ಎಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕಾನೂನು ತಿದ್ದುಪಡಿಗೆ ಸರ್ಕಾರ
ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈಗಾಗಲೇ ನಾಲ್ಕು ಸಭೆ ನಡೆದಿದೆ ಎಂದರು.ಆದರೆ ಬೇರೆ ರಾಜ್ಯಗಳಿಂದ ಬರುವ ಹಾಲನ್ನು ನಿಯಂತ್ರಣ ಮಾಡುವುದು ಕಾನೂನು ಪ್ರಕಾರ ಅಸಾಧ್ಯ. ಬೇರೆ ಬೇರೆ ಮಾರ್ಗಗಳಲ್ಲಿ ಸರ್ಕಾರ ಹೈನು ಉದ್ಯಮದ ರಕ್ಷಣೆಗೆ ಬದ್ಧಎಂದರು.ಕಾಂಗ್ರೆಸ್‍ನ ಎಂ.ಪಿ.ರವೀಂದ್ರ, ವಿನಯ್ ಕುಲಕರ್ಣಿ, ಶಿವರಾಂ ಹೆಬ್ಬಾರ್, ಬಿಜೆಪಿಯ ಲಕ್ಷ್ಮಣ ಸವದಿ, ಡಾ.ಅಶ್ವತ್ಥ ನಾರಾಯಣ, ಬಸವರಾಜ್  ಬೊಮ್ಮಾಯಿ, ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಜೆಡಿಎಸ್‍ನ ಶಿವಲಿಂಗೇಗೌಡ, ರೇವಣ್ಣ, ವೈ.ಎ.ವಿ.ದತ್ತ ಚರ್ಚೆಯಲ್ಲಿ ಭಾಗವಹಿಸಿದ್ದರು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com