
ಬೆಂಗಳೂರು: ನನ್ನ ಪ್ರಶ್ನೆಗೆ ಉತ್ತರ ಬಂದಿದೆ. ನೀವು ಸಹಿ ಹಾಕಿದ್ದೀರ. ಉತ್ತರವನ್ನು ಯಾವ ಕಾರಕೂನ ಬರೆದುಕೊಟ್ಟ? ಇದು ಸಚಿವರಿಗೆ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಕೇಳಿದ ಪ್ರಶ್ನೆ. ಅಷ್ಟೇ ಖಾರವಾಗಿ " ನಿಮಗೆ ಯಾರು ಪ್ರಶ್ನೆ ಬರೆದುಕೊಟ್ಟಿದ್ದು? ಆಸ್ಪತ್ರೆಯ ವೈದ್ಯರೇ? ಎಂದು ಸಚಿವರಿಂದ ಮರು ಪ್ರಶ್ನೆ
ಸದನದಲ್ಲಿ ಈ ಪ್ರಶ್ನೆಗಳು ಕೆಲಹೊತ್ತು ಸದಸ್ಯರು ಮತ್ತು ಸಚಿವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಅಂತಿಮವಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ತೀವ್ರ ತರಾಟೆಗೊಳಗಾಗಿ ವಿಷಾದಿಸುತ್ತೇನೆ ಎಂದು ಹೇಳುವುದರೊಂದಿಗೆ ಪ್ರಸಂಗಕ್ಕೆ ತೆರೆ ಬಿತ್ತು.
ಬಿಜೆಪಿಯ ಸೋಮಣ್ಣ ಬೇವಿನಮರದ ಅವರು ಬ್ಯಾಡಗಿಯ ನೂತನ ತಾಲೂಕು ಆಸ್ಪತ್ರೆಯ ಕಟ್ಟಡ ಕಾಮಗಾರಿ ಕುರಿತಂತೆ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಆರೋಗ್ಯ ಸಚಿವರ ಸಹಿ ಉತ್ತರ ಬಂದಿತ್ತು. ಆದರೆ ಉತ್ತರಿಂದ ತೃಪ್ತರಾಗದ ಸದಸ್ಯರು, ಯಾರೋ ಬರೆದುಕೊಟ್ಟ ಉತ್ತರಕ್ಕೆ ನೀವು ಸಹಿ ಹಾಕಿದ್ದೀರಿ ವಾಸ್ತವವೇ ಬೇರೆ ಎಂದು ಸಚಿವರನ್ನು ಚುಚ್ಚಿದರು. ಇದರಿಂದ ಅಸಮಾಧಾನಗೊಂಡ ಆರೋಗ್ಯ ಸಚಿವ ಖಾದರ್, ನಿಮಗೆ ಪ್ರಶ್ನೆ ಯಾರು ಬರೆದುಕೊಟ್ಟಿದ್ದು ಆಸ್ಪತ್ರೆಯ ವೈದ್ಯರೇ ಎಂದು ಮರು ಪ್ರಶ್ನೆ ಹಾಕಿದರು. ಇದು ಸದನದಲ್ಲಿದ್ದ ಉಳಿದ ಸದಸ್ಯರನ್ನು ಕೆರಳಿಸಿತು.
ನಾವೇನು ಸುಖಾಸುಮ್ಮನೆ ಪ್ರಶ್ನೆ ಕೇಳುವುದಿಲ್ಲ. ಸಮಸ್ಯೆ ಬಗೆಹರಿಯಬೇಕೆಂಬುದು ಉದ್ದೇಶವಾಗಿರುತ್ತದೆ. ಅಲ್ಲದೇ ಆ ಭಾಗದ ಶಾಸಕನಾಗಿ ಅಲ್ಲಿಯ ಸಮಸ್ಯೆಯಾ ಪರಿಚಯವಿರುತ್ತದೆ. ಸಚಿವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಬೇವಿನಮರದ ಟೀಕಿಸಿದರು. ಇದೇ ಸಂದರ್ಭದಲ್ಲಿ ವಿಮಲಾಗೌಡ ಸೇರಿದಂತೆ ಅನೇಕ ಸದಸ್ಯರು ಬೇವಿನಮರದ ಬೆಂಬಲಕ್ಕೆ ನಿಂತು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಅರಿತ ಯು.ಟಿ ಖಾದರ್, ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದರು.
Advertisement