ಆಂಜನೇಯಗೆ ಸ್ವಪಕ್ಷೀಯ ಶಾಸಕರಿಂದಲೇ ಚಾಟಿ

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ವಿರುದ್ಧ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರೇ ಕಿಡಿಕಾರಿದ್ದಾರೆ...
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ

ವಿಧಾನಸಭೆ: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ವಿರುದ್ಧ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರೇ ಕಿಡಿಕಾರಿದ್ದಾರೆ.

ಇಲಾಖಾವಾರು ಬೇಡಿಕೆ ಚರ್ಚೆ ವೇಳೆ ಮಾತನಾಡಿದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾವುದೇ ಹೊಸ ಯೋಜನೆಗಳನ್ನು ಇದುವರೆಗೆ ಜಾರಿಗೆ ತಂದಿಲ್ಲ. ಹೊಸ ಯೋಜನೆ ಜಾರಿಗೆ ತರುವ ಮಾತಿರಲಿ, ನೀವು ಪರಿಶಿಷ್ಟ ಜಾತಿ ಮತ್ತು ಪಂಗಡದ ಶಾಸಕರನ್ನು ಕರೆಸಿ ಸರ್ಕಾರ ನಿಗದಿ ಮಾಡಿದ ಹಣವನ್ನು ಯಾವ ರೀತಿ ವೆಚ್ಚ ಮಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮಾಹಿತಿ ಪಡೆದರೆ ಸಾಕು. ನಾವು ನಿಮಗೆ ದೊಡ್ಡ ನಮಸ್ಕಾರ ಹಾಕುತ್ತೇವೆ ಎಂದು ಹೇಳಿದರು.

ಆಂಧ್ರಪ್ರದೇಶದ ನಂತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನಿಗದಿಯಾದ ಹಣವನ್ನು ವೆಚ್ಚ ಮಾಡದೇ ಇದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೂ ಅವಕಾಶ ಕಲ್ಪಿಸುವ ರೀತಿ ವಿಶೇಷ ಘಟಕ ಯೋಜನೆ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ. ಆದರೆ, ಸಚಿವರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಖಾಲಿ ಇರುವ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಳಂಬವಾಗುತ್ತಿದೆ. ನ್ಯಾಯಾಲಯಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ಇದರ ಜತೆಗೆ ಖಾಸಗಿ ಅನುದಾನಿತ ಸಂಸ್ಥೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ಸಮರ್ಪಕವಾಗಿ ನೇಮಕ ಮಾಡಿಕೊಳ್ಳುತ್ತಿಲ್ಲ. ಆದರೆ, ಸರ್ಕಾರ ನೀಡುವ ಅನುದಾನವನ್ನು ಮಾತ್ರ ಪಡೆಯುತ್ತಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ. ಈ ಅನುದಾನವನ್ನು ಸ್ಥಗಿತಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಖಜಾನೆ ಖಾಲಿ ಆಗಿದೆಯೇ?: ಶಾಸಕ ರಮೇಶ್‍ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆಗೆ ನಿಗದಿಯಾದ ಹಣವನ್ನು ಖರ್ಚು ಮಾಡುವಾಗ ಸ್ವಲ್ಪ ವಿವೇಚನೆ ಇರಬೇಕು. ಹಣವನ್ನು ಖರ್ಚು ಮಾಡದ ಅಧಿಕಾರಿಗಳ ಪಟ್ಟಿ ಮಾಡಿ ಅವರ ವಿರುದಟಛಿ ಕ್ರಮ ತೆಗೆದುಕೊಳ್ಳುವುದಕ್ಕೆ ಸರ್ಕಾರಕ್ಕೆ ಏನಾಗಿದೆ ಎಂದು ಪ್ರಶ್ನಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ತಂದೆ ವಿಧಾನಸೌಧವನ್ನು ನೋಡಿರುವುದಕ್ಕೆ ಸಾಧ್ಯವಿಲ್ಲ. ಆದರೆ, ನಿಮಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಆಡಳಿತ ನಡೆಸುವ ಮಹಾಭಾಗ್ಯ ದೊರೆತಿದೆ. ಹೀಗಿದ್ದರೂ ವೈದ್ಯ, ದಂತವೈದ್ಯ ಎಂಜಿನಿಯರಿಂಗ್ ಪದವಿ ಓದುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಹಣ ಪಾವತಿ ಮಾಡುವುದಕ್ಕೂ ನಿಮಗೆ ಸಾಧ್ಯವಾಗುವುದಿಲ್ಲವೇ? ಕಾಲಕಾಲಕ್ಕೆ ಅವರ ಖಾತೆಗೆ ಹಣ ಹಾಕುವುದಕ್ಕೆ ಏನ್ರೀ ರೋಗ ಬಂದಿದೆ? ಸರ್ಕಾರದ ಖಜಾನೆ ಏನಾದ್ರೂ ಖಾಲಿ ಆಗಿದೆಯೇ? ಹಣ ಕಟ್ಟುವುದಕ್ಕೆ ವಿಳಂಬವಾದರೆ ಅಂಥ ವಿದ್ಯಾರ್ಥಿಗಳಿಗೆ ತೊಂದರೆ ನೀಡಬೇಡಿ ಎಂದು ಹೇಳುವುದಕ್ಕೂ ನಿಮಗೆ ಸಾಧ್ಯವಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು. ಇಂಥ ಅಸಹಾಯಕ ಸ್ಥಿತಿಯಲ್ಲಿ ಇರುವವರಿಗೆ ಸ್ಪಂದಿಸುವುದೇ ಸರ್ಕಾರ. ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎಂಬುದನ್ನು ನೀವು ಇಂಥ ಕ್ರಿಯೆಗಳಿಂದ ಸಾಬೀತು ಮಾಡಿ ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com