ವಿಧಾನಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಪುಟ್ಟಣ್ಣ

ನಿರೀಕ್ಷೆಯಂತೆ ವಿಧಾನಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಜೆಡಿಎಸ್‍ನ ಪುಟ್ಟಣ್ಣ ರಾಜಿನಾಮೆ ಸಲ್ಲಿದ್ದಾರೆ. ಪಕ್ಷದ ಆಂತರಿಕ ಒಪ್ಪಂದದ ಹಿನ್ನೆಲೆಯಲ್ಲಿ ರಾಜಿನಾಮೆ ಸಲ್ಲಿಸಿರುವ ಪುಟ್ಟಣ್ಣ, ತಮ್ಮ ಸ್ಥಾನವನ್ನು ಸಹೋದ್ಯೋಗಿ ಮಿತ್ರ ಮರಿತಿಬ್ಬೇಗೌಡರಿಗೆ...
ವಿಧಾನಪರಿಷತ್ ಉಪ ಸಭಾಪತಿ ಹುದ್ದೆಗೆ ಪುಟ್ಟಣ್ಣ ರಾಜಿನಾಮೆ (ಸಂಗ್ರಹ ಚಿತ್ರ)
ವಿಧಾನಪರಿಷತ್ ಉಪ ಸಭಾಪತಿ ಹುದ್ದೆಗೆ ಪುಟ್ಟಣ್ಣ ರಾಜಿನಾಮೆ (ಸಂಗ್ರಹ ಚಿತ್ರ)

ಬೆಂಗಳೂರು: ನಿರೀಕ್ಷೆಯಂತೆ ವಿಧಾನಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಜೆಡಿಎಸ್‍ನ ಪುಟ್ಟಣ್ಣ ರಾಜಿನಾಮೆ ಸಲ್ಲಿದ್ದಾರೆ. ಪಕ್ಷದ ಆಂತರಿಕ ಒಪ್ಪಂದದ ಹಿನ್ನೆಲೆಯಲ್ಲಿ ರಾಜಿನಾಮೆ ಸಲ್ಲಿಸಿರುವ ಪುಟ್ಟಣ್ಣ, ತಮ್ಮ ಸ್ಥಾನವನ್ನು ಸಹೋದ್ಯೋಗಿ ಮಿತ್ರ ಮರಿತಿಬ್ಬೇಗೌಡರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ.

ಪುಟ್ಟಣ್ಣ ಗುರುವಾರ ಬೆಳಗ್ಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಸಲ್ಲಿಸಿದರು. ಸಭಾಪತಿ ಶಂಕರಮೂರ್ತಿ ಗುರುವಾರ ಸದನದಲ್ಲೇ ಈ ವಿಷಯ ಪ್ರಕಟಿಸಿದರು. ರಾಜಿನಾಮೆಯನ್ನು ಮಧ್ಯಾಹ್ನದ ವೇಳೆ ಅಂಗೀಕರಿಸಲಾಗಿದ್ದು, ಶುಕ್ರವಾರ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆಯೂ ಇದೆ.

ಚುನಾವಣೆಯಲ್ಲಿ ಉಪ ಸಭಾಪತಿ ಅಭ್ಯರ್ಥಿಯಾಗಿ ಜೆಡಿಎಸ್‍ನ ಮರಿತಿಬ್ಬೇಗೌಡರನ್ನು ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದ್ದು, ಇದಕ್ಕೆ ಎಂದಿನಂತೆ ಬಿಜೆಪಿಯ ಬೆಂಬಲ ಪಡೆಯಲಿದೆ. ಸದನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಹೋರಾಟಗಳನ್ನು ನಡೆಸುತ್ತಿದ್ದು, ಚುನಾವಣೆಗಳಲ್ಲೂ ಪರಸ್ಪರ ಬೆಂಬಲ ವ್ಯಕ್ತಪಡಿಸುತ್ತಾ ಬಂದಿವೆ. ಅದೇ ರೀತಿ ಸಭಾಪತಿ ಮತ್ತು ಉಪ ಸಭಾಪತಿ ಚುನಾವಣೆಗಳಲ್ಲೂ ಒಂದಾಗಿ ಸ್ಪರ್ಧಿಸಿದ್ದರಿಂದ ಬಿಜೆಪಿಯ ಶಂಕರಮೂರ್ತಿ ಸಭಾಪತಿಯಾದರು. ಉಪ ಸಭಾಪತಿಯಾಗಿ ವಿಮಲಾಗೌಡ ಆಯ್ಕೆಯಾಗಿದ್ದರು. ಆದರೆ, ಉಪ ಸಭಾಪತಿ ಸ್ಥಾನವನ್ನು ಜೆಡಿಎಸ್ ತಮಗೆ ಬಿಟ್ಟು ಕೊಡುವಂತೆ ಕೇಳಿದ್ದರಿಂದ ವಿಮಲಾಗೌಡರನ್ನು ಇಳಿಸಿ ಜೆಡಿಎಸ್‍ನ ಪುಟ್ಟಣ್ಣಗೆ ಅವಕಾಶ ನೀಡಲಾಯಿತು.

ಆಗ ಜೆಡಿಎಸ್‍ನಲ್ಲಿ ಉಪ ಸಭಾಪತಿ ಅಭ್ಯರ್ಥಿಗಳು ಹೆಚ್ಚಾಗಿದ್ದರಿಂದ ಆಯ್ಕೆ ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಪುಟ್ಟಣ್ಣ ಮತ್ತು ಮರಿತಿಬ್ಬೇಗೌಡರ ನಡುವೆ ಪೈಪೋಟಿ ಹೆಚ್ಚಾಗಿತ್ತು. ಅಂತಿಮವಾಗಿ ಪಕ್ಷದ ವರಿಷ್ಠರು ಒಂದು ವರ್ಷದ ಅವಧಿಗೆ ಪುಟ್ಟಣ್ಣ ಉಪ ಸಭಾಪತಿಯಾಗಲಿ. ನಂತರ ಮರಿತಿಬ್ಬೇಗೌಡರು ಆ ಸ್ಥಾನ ಅಲಂಕರಿಸಲಿ ಎಂದು ಸೂಚಿಸಿದ್ದರು.

ಅಂದರೆ ಪುಟ್ಟಣ್ಣ ಈ ಹಿಂದೆಯೇ ಉಪ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರಿಂದ ವರ್ಷದ ನಂತರ ರಾಜಿನಾಮೆ ನೀಡುವಂತೆ ಪುಟ್ಟಣ್ಣಗೆ ಸೂಚಿಸಿದ್ದರು. ಆದರೆ, ಪುಟ್ಟಣ್ಣ
ಎರಡು ಬಾರಿಗೆ ಉಪ ಸಭಾಪತಿಯಾಗಿ ಒಂದು ವರ್ಷ ತುಂಬಿದರೂ ರಾಜಿನಾಮೆ ಸಲ್ಲಿಸಿರಲಿಲ್ಲ. ಇದನ್ನು ಮರಿತಿಬ್ಬೇಗೌಡರು ಪಕ್ಷದ ನಾಯಕರ ಗಮನಕ್ಕೆ ತರುತ್ತಿದ್ದಂತೆ ಪುಟ್ಟಣ್ಣ ಅವರಿಗೆ ಗುರುವಾರವೇ ರಾಜಿನಾಮೆ ಸಲ್ಲಿಸುವಂತೆ ಸೂಚನೆ ಬಂದಿತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪುಟ್ಟಣ್ಣ ರಾಜಿನಾಮೆ ಸಲ್ಲಿಸಿದ್ದಾರೆ.

ಶನಿವಾರ ಚುನಾವಣೆ
ಪರಿಷತ್ತಿನ ಉಪ ಸಭಾಪತಿಯಾಗಿದ್ದ ಪುಟ್ಟಣ್ಣನವರ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಆ.1ರಂದು ಚುನಾವಣೆ ನಡೆಯಲಿದೆ. ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಮೇಲ್ಮನೆಯಲ್ಲಿ ಸದಸ್ಯರಿಗೆ ಈ ಮಾಹಿತಿ ನೀಡಿದರು. ಬಿಜೆಪಿ ಮತ್ತು ಜೆಡಿಎಸ್‍ನ ಒಪ್ಪಂದದಂತೆ ಉಪ ಸಭಾಪತಿ ಸ್ಥಾನ ಜೆಡಿಎಸ್‍ಗೆ ಮೀಸಲಾಗಿದೆ. ಸದ್ಯ ಜೆಡಿಎಸ್ ನಿಂದ ಮರಿತಿಬ್ಬೇಗೌಡ ಅವರು ಉಪ ಸಭಾಪತಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಬೇರೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದೇ ಹೋದಲ್ಲಿ ಅವಿರೋಧ ಆಯ್ಕೆ ನಡೆಯಲಿದೆ. ಆದರೆ, ಆಯ್ಕೆ ಪ್ರಕ್ರಿಯೆಗಳು ಮಾತ್ರ ನಿಯಮದಂತೆ ಜುಲೈ 31 ಮತ್ತು ಆ.1ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com