ವಿಧಾನ ಪರಿಷತ್ ಉಪ ಸಭಾಪತಿಯಾಗಿ ಮರಿತಿಬ್ಬೇಗೌಡ ಆಯ್ಕೆ

ನಿರೀಕ್ಷೆಯಂತೆ ವಿಧಾನ ಪರಿಷತ್ ನೂತನ ಉಪ ಸಭಾಪತಿಯಾಗಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಶನಿವಾರ ಆಯ್ಕೆಯಾಗಿದ್ದಾರೆ.
ಮರಿತಿಬ್ಬೇಗೌಡ
ಮರಿತಿಬ್ಬೇಗೌಡ

ಬೆಂಗಳೂರು: ನಿರೀಕ್ಷೆಯಂತೆ ವಿಧಾನ ಪರಿಷತ್ ನೂತನ ಉಪ ಸಭಾಪತಿಯಾಗಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಶನಿವಾರ ಆಯ್ಕೆಯಾಗಿದ್ದಾರೆ.

ಪರಿಷತ್ತಿನ ಉಪ ಸಭಾಪತಿಯಾಗಿದ್ದ ಪುಟ್ಟಣ್ಣನವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಮರಿತಿಬ್ಬೇಗೌಡ ಅವರು 42 ಮತಗಳನ್ನು ಪಡೆದು ಭರ್ಜರಿ ಜಯ ಗಳಿಸಿದ್ದಾರೆ. ಇನ್ನು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಧರ್ಮಸೇನ ಅವರು ಕೇವಲ 29 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ವಿಪ್ ಜಾರಿಯಾಗಿದ್ದರೂ ಕಾಂಗ್ರೆಸ್‌ನ ಕೆ.ಗೋವಿಂದರಾಜು ಹಾಗೂ ಎಂ.ಆರ್. ಸೀತಾರಾಮ್ ಅವರು ಸದನಕ್ಕೆ ಗೈರು ಆಗಿದ್ದರು.

ಕಳೆದ ಗುರುವಾರ ಜೆಡಿಎಸ್‌ನ ಪುಟ್ಟಣ್ಣ ಅವರು ಪಕ್ಷದ ಆಂತರಿಕ ಒಪ್ಪಂದದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿ, ತಮ್ಮ ಸ್ಥಾನವನ್ನು ಸಹೋದ್ಯೋಗಿ ಮರಿತಿಬ್ಬೇಗೌಡರಿಗೆ ಬಿಟ್ಟುಕೊಟ್ಟಿದ್ದರು.

ನಂತರ ಚುನಾವಣೆಯಲ್ಲಿ ಉಪ ಸಭಾಪತಿ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡರನ್ನು ಜೆಡಿಎಸ್ ಕಣಕ್ಕಿಳಿಸಿತ್ತು. ಇದಕ್ಕೆ ಎಂದಿನಂತೆ ಬಿಜೆಪಿ ಬೆಂಬಲ ನೀಡಿತು. ಸದನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಹೋರಾಟಗಳನ್ನು ನಡೆಸುತ್ತಿದ್ದು, ಚುನಾವಣೆಗಳಲ್ಲೂ ಪರಸ್ಪರ ಬೆಂಬಲ ವ್ಯಕ್ತಪಡಿಸುತ್ತಾ ಬಂದಿವೆ. ಅದೇ ರೀತಿ ಸಭಾಪತಿ ಮತ್ತು ಉಪ ಸಭಾಪತಿ ಚುನಾವಣೆಗಳಲ್ಲೂ ಒಂದಾಗಿ ಸ್ಪರ್ಧಿಸಿದ್ದರಿಂದ ಬಿಜೆಪಿಯ ಶಂಕರಮೂರ್ತಿ ಸಭಾಪತಿಯಾದರು. ಉಪ ಸಭಾಪತಿಯಾಗಿ ವಿಮಲಾಗೌಡ ಆಯ್ಕೆಯಾಗಿದ್ದರು. ಆದರೆ, ಉಪ ಸಭಾಪತಿ ಸ್ಥಾನವನ್ನು ಜೆಡಿಎಸ್ ತಮಗೆ ಬಿಟ್ಟು ಕೊಡುವಂತೆ ಕೇಳಿದ್ದರಿಂದ ವಿಮಲಾಗೌಡರನ್ನು ಇಳಿಸಿ ಜೆಡಿಎಸ್‍ನ ಪುಟ್ಟಣ್ಣಗೆ ಅವಕಾಶ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com