
ಬೆಂಗಳೂರು: ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಅವರು ವೃತ್ತಿ ದುರ್ನಡತೆ ಎಸಗಿದ್ದಾರೆಂದು ಆರೋಪಿಸಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಕೀಲ ಪರಿಷತ್ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ತಿಳಿಸಿದೆ.
ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಕುಟುಂಬದ ವಿರುದ್ಧ ವಿ.ಎಸ್. ಉಗ್ರಪ್ಪ ಮಾಡಿರುವ ಆರೋಪ ಖಂಡಿಸಿ ಬೆಂಗಳೂರು ಜೆಡಿಎಸ್ ಕಾನೂನು ಘಟಕ ಉಗ್ರಪ್ಪ ವಿರುದ್ಧ ವೃತ್ತಿ ದುರ್ನಡತೆ ಎಸಗಿದ್ದಾರೆಂದು ಜೂ.5ರಂದು ರಾಜ್ಯ ವಕೀಲ ಪರಿಷತ್‍ನಲ್ಲಿ ದೂರು ದಾಖಲಿಸಿತ್ತು. ವಿವರಣೆ ನೀಡುವಂತೆ ಕರ್ನಾಟಕ ರಾಜ್ಯ ವಕೀಲ ಪರಿಷತ್ ಉಗ್ರಪ್ಪ ಅವರಿಗೆ ಗುರುವಾರ ಶೋಕಾಸ್ ನೋಟಿಸ್ ಜಾರಿ ಮಾಡುವುದಾಗಿ ವಕೀಲ ಪರಿಷತ್‍ನ ಅಧ್ಯಕ್ಷ ಪಿ.ಪಿ. ಹೆಗ್ಡೆ ತಿಳಿಸಿದ್ದಾರೆ.
`ಗೌಡರ ಕುಟುಂಬದ ಆಸ್ತಿ ಈ ಮೊದಲು ಎಷ್ಟಿತ್ತು ಎನ್ನುವುದು ನನಗೆ ತಿಳಿದಿದೆ. ನಾನು ಅವರ ವಕೀಲನಾಗಿ ಚುನಾವಣೆ ಸಂದರ್ಭದಲ್ಲಿ ಪ್ರಮಾಣಪತ್ರ ಸಿದ್ಧಪಡಿಸುತ್ತಿದ್ದೆ. ಹೀಗಾಗಿ ಇದ್ದಕ್ಕಿದ್ದಂತೆ ಆಗಾಧ ಪ್ರಮಾಣದ ಆಸ್ತಿ ಎಲ್ಲಿಂದ ಬಂತು ಎನ್ನುವುದನ್ನು ತಿಳಿಸಲಿ' ಎಂದು ಉಗ್ರಪ್ಪ ಆರೋಪ ಹೊರಿಸಿದ್ದಾರೆಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಈ ಹೇಳಿಕೆಯಿಂದ ಅವರು ದೇವೇಗೌಡರ ಕಕ್ಷಿದಾರರಾಗಿದ್ದಾರೆಂದು ತಿಳಿದುಬರುತ್ತದೆ. ವೃತ್ತಿಯಲ್ಲಿ ವಕೀಲರಾಗಿರುವ ಇವರು ಈ ರೀತಿ ಹೇಳಿಕೆ ನೀಡುವ ಮೂಲಕ ಭಾರತೀಯ ಸಾಕ್ಷಿ ಕಾಯ್ದೆ 1872 ಸೆಕ್ಷನ್ 126ರ ಉಲ್ಲಂಘನೆ ಆಗಿದ್ದು, ವೃತ್ತಿಯಲ್ಲಿ ದುರ್ನಡತೆ ಎಸಗಿದ್ದಾರೆ. ಅದರ ಪ್ರಕಾರ, ಕಕ್ಷಿದಾರರು ನೀಡುವ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂದಿದೆ. ಆದರೆ, ಉಗ್ರಪ್ಪ ಅವರು ಮಾಹಿತಿ ಸೋರಿಕೆ ಮಾಡುವ ಮೂಲಕ ವೃತ್ತಿಗೆ ಅಪಮಾನ ಎಸಗಿದ್ದಾರೆ. ಆದ್ದರಿಂದ ಉಗ್ರಪ್ಪ ವಿರುದ್ಧ ವಕೀಲ ಕಾಯ್ದೆ 1951, ಸೆಕ್ಷನ್ 35ರ ಪ್ರಕಾರ ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.
Advertisement