

ಬೆಂಗಳೂರು: ಬೆಳಗಾವಿ ಅಧಿವೇಶನ ಬಂದ ತಕ್ಷಣ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅದೇನೋ ದೆವ್ವ ದೇವರು ಮೇಮೇಲೆ ಬಂದವರಂತೆ ಆಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೃಷಿ ಕುಟುಂಬದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ರೈತರ ಕಷ್ಟದ ಅರಿವಿದೆ.ಈ ಕಾರಣಕ್ಕಾಗಿ ಅವರು ಕೃಷಿಗೆ ಪ್ರಧಾನ ಆದ್ಯತೆ ನೀಡಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ, ಆದರೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮಾತ್ರ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ರಾಗಿ ಭತ್ತ, ನವಣೆ ಹೆಸರು, ದಾಳಿಂಬೆ ಬೆಳೆಗಾರರ ಬಗ್ಗೆ ಯಾಕೆ ಹೋರಾಟ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಕ್ಷಮೆ ಕೇಳಲಿ: ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವ ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ತುರ್ತು ಪರಿಸ್ಥಿತಿ ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತ. ಈ ಸಂಬಂಧ ಅವರು ರಾಜ್ಯದ ಜನತೆಯ ಭೇಷರತ್ ಕ್ಷಮೆ ಕೇಳಬೇಕು. ಲಲಿತ್ ಮೋದಿ ಅವರಿಗೆ ನೆರವು ನೀಡಿರುವ ಸುಷ್ಮಾ ಸ್ವರಾಜ್, ವಸುಂದರಾ ರಾಜೇ, ಮಕಲಿ ಪದವಿ ಪ್ರಮಾಣ ಪತ್ರ ಹಗರಣದಲ್ಲಿ ಭಾಗಿಯಾಗಿರುವ ಸ್ಮೃತಿ ಇರಾನಿ, ಮಹಾರಾಷ್ಟ್ರದ ಸಚಿವೆ ಪಂಕಜ ಮುಂಡೆ ರಾಜೀನಾಮೆ ನೀಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.