ಕಬ್ಬು ಹಣ ಕೊಡದಿದ್ರೆ ರೈತರು ಕೋಲನ್ನು ಹಿಡೀತಾರೆ: ಕೆ.ಎಸ್.ಈಶ್ವರಪ್ಪ ಎಚ್ಚರಿಕೆ

ಕಬ್ಬು ಬೆಳೆಗಾರರಿಗೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡದಿದ್ದರೆ ರೈತರು ಕೋಲು ಹಿಡಿದು ನಿಲ್ಲುತ್ತಾರೆ. ಮುಖ್ಯಮಂತ್ರಿ, ಸಚಿವರು ಬಂದರೆ ಕೈಕಾಲು ಮುರೀತಾರೆ. ಕಾಂಗ್ರೆಸ್ ಪಕ್ಷದವರು ಇನ್ನು ಮುಂದೆ ಇಂಥ...
ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ
ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ

ವಿಧಾನ ಪರಿಷತ್: ಕಬ್ಬು ಬೆಳೆಗಾರರಿಗೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡದಿದ್ದರೆ ರೈತರು ಕೋಲು ಹಿಡಿದು ನಿಲ್ಲುತ್ತಾರೆ. ಮುಖ್ಯಮಂತ್ರಿ, ಸಚಿವರು ಬಂದರೆ ಕೈಕಾಲು ಮುರೀತಾರೆ. ಕಾಂಗ್ರೆಸ್ ಪಕ್ಷದವರು ಇನ್ನು ಮುಂದೆ ಇಂಥ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರೈತರು ಸಂಯಮ, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈಗ ಆತ್ಮಹತ್ಯೆಯ ಮಾರ್ಗವನ್ನೂ ಹಿಡಿದಿದ್ದಾರೆ. ಇನ್ನೂ ಕಬ್ಬು ಬೆಳೆಗಾರರಿಗೆ ಹಣ ನೀಡಲು ವಿಳಂಬ ಮಾಡಿದರೆ ರೈತರು ಕೋಲು ಹಿಡಿದು ಕೈಕಾಲು ಮುರಿಯುವ ದಿನಗಳು ದೂರವಿಲ್ಲ ಎಂದು ಅವರು ಎಚ್ಚರಿಸಿದರು. ಕಬ್ಬು ಬೆಳೆಗಾರರ ಕುರಿತು ನಿಯಮ 68ರ ಅಡಿಯಲ್ಲಿ ಚರ್ಚೆ ಆರಂಭಿಸಿದ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಜ. 21.2013ರಂದು ಹೇಳಿಕೆ ನೀಡಿ ಕಬ್ಬು ಬೆಳೆಗಾರರಿಗೆ ಹಣ ನೀಡದ ಕಾರ್ಖಾನೆ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸದನದಲ್ಲಿ ಭರವಸೆ ನೀಡಿದ್ದರು. ಆದರೆ ಜೂ. 29. 2015 ಆದರೂ ಇದುವರೆಗೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಪಾದಿಸಿದರು.

ಕಾರ್ಖಾನೆಯಲ್ಲಿರುವ ಸಕ್ಕರೆಯನ್ನು ಜಪ್ತಿ ಮಾಡಿ ರೈತರಿಗೆ ಹಣ ನೀಡಲು ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರೆ, ಅದೇ ಸಂಪುಟದಲ್ಲಿರುವ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಈ ಹೇಳಿಕೆಯನ್ನು ವಿರೋಧಿಸುತ್ತಾರೆ. ಹಾಗಿದ್ದರೆ ಸದನದ ಪಾವಿತ್ರ್ಯತೆಗೆ ಬೆಲೆ ಇಲ್ಲವೇ? ಸರ್ಕಾರದ ಮಾತಿಗೆ ಕಿಮ್ಮತ್ತು ಇಲ್ಲವೆ ಎಂದು ಲೇವಡಿ ಮಾಡಿದರು. ರೈತರು ಇದುವರೆಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಸಹನೆ ಇನ್ನೆಷ್ಟು ದಿನ ಉಳಿಯಲಿದೆ ಎಂದು ಈಶ್ವರಪ್ಪ ಹೇಳುತ್ತಿದ್ದಂತೆ ವಿ.ಎಸ್. ಉಗ್ರಪ್ಪ ತಡೆದು, ನೀವು ಪ್ರತಿಭಟನೆ, ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿದ್ದೀರಿ ಎಂದಾಗ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಗದ್ದಲದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎನ್ನುವುದು ಕೇಳದಾಯಿತು. ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಸರ್ಕಾರ ಈ ತನಕ ರು.600 ಕೋಟಿ ಸಕ್ಕರೆಯನ್ನು ಜಪ್ತಿ ಮಾಡಿದೆ. ಬೆಳೆಗಾರರಿಗೆ ಕೊಡಲು ರು.450 ಕೋಟಿ ಸಾಕು. ಇಷ್ಟು ಹಣ ಖಜಾನೆಯಲ್ಲಿ ಇಲ್ಲವೇ? ಬೇರೆ ಬೇರೆ ಯೋಜನೆಗಳಿಗೆ ಸಾವಿರಾರು ಕೋಟಿ ನೀಡುತ್ತೀರಿ. ಕೇವಲ ರು.450 ಕೋಟಿ ಯಾವ ಲೆಕ್ಕವೂ ಅಲ್ಲ. ಕೂಡಲೇ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com