ಕಾವೇರಿ ನದಿ ನೀರು ಹಂಚಿಕೆ ಪ್ರಧಾನಿ ನಿಲುವು ಪ್ರಕಟಿಸಲಿ

ಕಾವೇರಿ ನದಿ ನೀರಿನ ಹಂಚಿಕೆ ಬಗ್ಗೆ ಎರಡು ರಾಜ್ಯಗಳ ನಡುವೆ ಉಂಟಾಗಿರುವ ವಿವಾದದ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟ ನಿಲುವು ತಳೆಯಬೇಕು...
ಎಚ್ .ಡಿ. ದೇವೇಗೌಡ
ಎಚ್ .ಡಿ. ದೇವೇಗೌಡ

ಹಾಸನ: ಕಾವೇರಿ ನದಿ ನೀರಿನ ಹಂಚಿಕೆ ಬಗ್ಗೆ ಎರಡು ರಾಜ್ಯಗಳ ನಡುವೆ ಉಂಟಾಗಿರುವ ವಿವಾದದ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟ ನಿಲುವು ತಳೆಯಬೇಕು. ಆಗ ಮಾತ್ರ ವಿವಾದ ತ್ವರಿತ ಬಗೆಹರಿಯಲು ಸಾಧ್ಯ ಎಂದು ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಕಾವೇರಿ ನ್ಯಾಯಾಧೀಕರಣ ಮತ್ತು ಸುಪ್ರಿಂ ಕೋರ್ಟ್ ಎರಡರಲ್ಲೂ ವಿವಾದ ಇದೆ. ಆದರೆ ವಿಶೇಷ ಅರ್ಜಿ (ಎಸ್‍ಎಲ್ ಪಿ)ಯಲ್ಲಿ 1924 ರಿಂದಲೂ ಕರ್ನಾಟಕಕ್ಕೆ ಕಾವೇರಿ ನದಿ ನೀರಿನ ಹಂಚಿಕೆಯನ್ನು ಸವಿಸ್ತಾರವಾಗಿ ತಿಳಿಸಲಾಗಿದೆ.

ಈ ಎಸ್‍ಎಲ್‍ಪಿ ಅರ್ಜಿಯ ಪ್ರತಿಯಲ್ಲಿ ಅಂಶಗಳು ವಾಸ್ತವದಿಂದ ಕೂಡಿವೆ. ಇದರ ಆಧಾರದ ಮೇಲೆ ಪ್ರಧಾನಿ, ಕೇಂದ್ರ ಸರ್ಕಾರದ ನಿಲುವು ಪ್ರಕಟಿಸಬೇಕು ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು. ಕೇಂದ್ರ ಸರ್ಕಾರ ಯಾರ ಹಂಗಿನಲ್ಲೂ ಇಲ್ಲ.

ಸ್ಪಷ್ಟ ಬಹುಮತ ಹೊಂದಿದೆ. ಹಾಗಾಗಿ ಮೋದಿ ಕಾವೇರಿ ವಿವಾದದ ಸತ್ಯಾಸತ್ಯತೆ ಪರಿಶೀಲಿಸಿ ನಿಲುವು ಪ್ರಕಟಿಸಲೇಬೇಕಾಗಿದೆ. ಇನ್ನುಷ್ಟು ದಿನ ದೂಡುವುದು ಎರಡೂ ರಾಜ್ಯಗಳ ಹಿತದೃಷ್ಟಿಯಿಂದಲೂ ಸರಿಯಲ್ಲ ಎಂದರು.

ಮೇಕೆದಾಟು ತೊಂದರೆಯಿಲ್ಲ: ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣ ಮಾಡಿ ಸಮುದ್ರಕ್ಕೆ ವ್ಯರ್ಥವಾಗಿ ಹೋಗುವ ನೀರನ್ನು ಸಂಗ್ರಹಿಸಬಹುದು.

ಒಂದು ವೇಳೆ ತಮಿಳುನಾಡಿಗೆ ನೀರಿನ ಕ್ಷಾ ಮ ಉಂಟಾದರೆ ಇದೇ ನೀರನ್ನು ಬಿಡಲಾಗುವುದು ಎಂದು ನಾನು ಪ್ರಧಾನಿಯಾಗಿದ್ದಾಗ ಅಂದಿನ ತಮಿಳುನಾಡು ಸಿಎಂ ಕರುಣನಿಧಿ ಅವರಿಗೆ ವಿವರಿಸಿದ್ದೆ.

ನಂತರ ಇದು ನನೆಗುದಿಗೆ ಬಿದ್ದಿತು ಎಂದರು. ಏನೇ ಆಗಲಿ, ಹೋಗಲಿ ಕಾವೇರಿ, ಕೃಷ್ಣ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗುವುದನ್ನು ತಡೆಯಲು ಪ್ರಾಣ ಇರೋವರೆಗೂ ಹೋರಾಟ ಮಾಡುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com