
ವಿಧಾನಪರಿಷತ್ತು: ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಮೂರು ಸಾವಿರ ಎಕರೆಯಷ್ಟು ಭೂಮಿಯನ್ನು ಎಂಟು ಗಣಿ ಕಂಪನಿಗಳಿಗೆ ನವೀಕರಣ ಮಾಡಿಕೊಟ್ಟ ಕ್ರಮ ಊರ್ಜಿತವಲ್ಲ! ಹೀಗಂತ ರಾಜ್ಯದ ಕಾನೂನು ಇಲಾಖೆಯೇ ಸ್ಪಷ್ಟಪಡಿಸಿದೆ. ಈ ಸಂಬಂಧ ಪ್ರತಿಪಕ್ಷ ನಾಯಕ ಈಶ್ವರಪ್ಪ ದಾಖಲೆಯನ್ನು ಸದನದಲ್ಲಿ ಪ್ರಸ್ತಾಪಿಸಿದರು. ಹಿಂದಿನ ಅಧಿವೇಶನದಲ್ಲಿ ಗಣಿ ಅವ್ಯವಹಾರವಾಗಿದೆ ಎಂದು ಈಶ್ವರಪ್ಪ ಸದನದಲ್ಲಿ ಪ್ರಸ್ತಾಪಿಸಿದ್ದರಲ್ಲದೇ, ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಿದ್ದರು. ಆದರೆ,ಮುಖ್ಯಮಂತ್ರಿಯವರು ರಾಜ್ಯಪಾಲರ ಭಾಷಣದ ವೇಳೆ ಈ ಸಂಗತಿಯನ್ನು ಪ್ರಸ್ತಾಪಿಸಿ ಅಂತಹದ್ದೇನು ನಡೆದಿಲ್ಲಎಂದು ತಿಪ್ಪೆಸಾರಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಈಶ್ವರಪ್ಪನವರು ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರ ಬರೆದು, ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮುಖ್ಯಮಂತ್ರಿಯವರು ತಮಗೆ ಬಂದ ಪತ್ರವನ್ನು ಕಾನೂನು ಇಲಾಖೆಗೆ ಕಳುಹಿಸಿ ವಸ್ತುಸ್ಥಿತಿ ಅರಿಯುವಪ್ರಯತ್ನ ಮಾಡಿದ್ದರು.ವಾಸ್ತವವಾಗಿ ಕೇಂದ್ರ ಸರ್ಕಾರ ಗಣಿಯನ್ನು ಹರಾಜು ಹಾಕುವಂತೆ ಅಧಿಸೂಚನೆ ಹೊರಡಿಸಿದ ನಂತರ ಗಣಿ ನವೀಕರಣ ಮಾಡಿದ್ದಾರೆ ಎಂಬುದು ಈಶ್ವರಪ್ಪನವರ ಆರೋಪವಾಗಿತ್ತು. ಇದರಿಂದ ಹಲವು ಕೋಟಿ ಅವ್ಯವಹಾರವಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿನ ಮೇಲೆ ಟೀಕಿಸಿದ್ದರು. ಇದೀಗ ಮುಖ್ಯಮಂತ್ರಿಯವರ ಪತ್ರದ ಮೇಲೆ ಸಮಜಾಯಿಷಿ ನೀಡಿರುವ ಕಾನೂನು ಇಲಾಖೆ, ನಿಯಮಗಳ ಪ್ರಕಾರ ಈಗ ಮಾಡಿರುವ ಗಣಿನವೀಕರಣ ಊರ್ಜಿತವಾಗುವುದಿಲ್ಲ ಎಂದು ಸ್ಪಷ್ಟವಾಗಿ ಅಭಿಪ್ರಾಯ ಹೇಳಿದೆ. ಕಾನೂನು ಇಲಾಖೆಯ ಅಭಿಪ್ರಾಯದ ಪ್ರತಿಯನ್ನು ಸೋಮವಾರ ಸದನಕ್ಕೆ ತಂದಿದ್ದ ಈಶ್ವರಪ್ಪ, ಅದನ್ನು ಪ್ರಸ್ತಾಪಿಸಿ ಚರ್ಚೆಗೆ ಮತ್ತೆ ಅವಕಾಶ ಕೊಡಬೇಕು ಹಾಗೂ ನವೀಕರಣದ ಅನುಮತಿಯನ್ನು ರದ್ದುಗೊಳಿಸುವಂತೆ ಪಟ್ಟುಹಿಡಿದರು
Advertisement