
ಬೆಂಗಳೂರು: ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವು ರಾಷ್ಟ್ರಮಟ್ಟದಲ್ಲೂ ಸಾಕಷ್ಟು ಸಂಚಲನ ಮೂಡಿಸಿದೆ. ಈ ಬಗ್ಗೆ ಟೈಮ್ಸ್ ನೌ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ತೀವ್ರ ಮುಖ ಭಂಗಕ್ಕೊಳಗಾಗಿದ್ದಾರೆ.
ಒಂದು ಹಂತದಲ್ಲಿ ಸಂದರ್ಶಕ ಅರ್ನಬ್ ಗೋಸ್ವಾಮಿ, ಕಮಿಷನರ್ ಅವರೇ ರಾಜಕಾರಣಿಗಳು ಮತ್ತು ಪೋಲೀಸರು ಸೇರಿ ಈ ಪ್ರಕರಣವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಡಿ.ಕೆ. ರವಿ ಅವರ ಕುಟುಂಬದ ಸದಸ್ಯರಾಗಿದ್ದರೆ ನೀವು ಹೀಗೆ ಮಾತನಾಡುತ್ತಿದ್ದಿರಾ? ನಿಮ್ಮ ಆತ್ಮಸಾಕ್ಷಿ ಆಗಲೂ ಹೀಗೆ ಹೇಳುತ್ತಿತ್ತಾ? ಎಲ್ಲಕ್ಕಿಂತ ಮೊದಲು ರವಿ ಆತ್ಮಹತ್ಯೆ ಮಾಡಿ ಮಾಡಿಕೊಂಡಿದ್ದಾರೆ ಎಂಬುದನ್ನು ನಿಮ್ಮ ಮನಸ್ಸು ಒಪ್ಪುತ್ತಿತ್ತಾ? ಪ್ರಕರಣ ಬೇರೆ ಆಯಾಮಗಳನ್ನು ತನಿಖೆಗೊಳಪಡಿಸುವ ಮೊದಲೇ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಹೇಗೆ ಬಂದಿರಿ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಆಯುಕ್ತರ ಬಳಿ ಯಾವುದೇ ಉತ್ತರ ಇರಲಿಲ್ಲ.
ಈ ಪ್ರಕರಣವನ್ನು ಒಂದೇ ಬಾರಿಗೆ ಆತ್ಮಹತ್ಯೆ ಎಂದು ಹೇಗೆ ಪರಿಗಣಿಸುತ್ತೀರಿ? ಕೊಲೆ ನಡೆದಿರಲು ಯಾಕೆ ಸಾಧ್ಯವಿಲ್ಲ ಎಂದು ಕೇಳಿದ ಪ್ರಶ್ನೆಗೆ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಏನೂ ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲಷ್ಟೆ ನಿಖರಕಾರಣ ನೀಡಲು ಸಾಧ್ಯ ಎಂದು ಎಂ.ಎನ್. ರೆಡ್ಡಿ ಉತ್ತರಿಸಿದರು. ಡಿ.ಕೆ ರವಿ ಅವರು ವಾಣಿಜ್ಯ ತೆರಿಗೆ ವಸೂಲಿ ಮಾಡಲು ದಾಳಿ ನಡೆಸಿದ ಎಂಬೆಸ್ಸಿ ಗ್ರೂಪ್ ಗೂ ಸರ್ಕಾರದಲ್ಲಿರುವ ಸಚಿವರಿಗೆ ಏನಾದರೂ ಸಂಬಂಧ ಇದೆಯೇ? ರವಿ ಸಾವಿನ ಹಿಂದೆ ಈ ಗ್ರೂಪ್‍ನ ಕೈವಾಡ ಇದೆಯೇ ಎಂಬ ಬಗ್ಗೆ ನೀವು ಯಾಕೆ ತನಿಖೆ ಕೈಗೊಳ್ಳಬಾರದು ಎಂಬ ಪ್ರಶ್ನೆಗೆ, ಉತ್ತರಿಸಲು ತಡವರಿಸಿದರು.
ದೃಷ್ಟಿಕೋನ ಬದಲಾಗಬಾರದೇಕೆ?: ಮತ್ತೆ ಮತ್ತೆ ಇದು ಆತ್ಮಹತ್ಯೆ ಎಂದೇ ಏಕೆ ಹೇಳುತ್ತೀರಿ, ಕೊಲೆಯಾಗಿರುವ ಸಾಧ್ಯತೆಯೂ ಇದೆಎಂಬ ದೃಷ್ಟಿಕೋನದಲ್ಲಿ ಈ ಪ್ರಕರಣವನ್ನು ಏಕೆ ನೋಡುತ್ತಿಲ್ಲ ಎಂಬ ಪ್ರಶ್ನೆಗೆ, ರವಿ ದೇಹದಲ್ಲಿ ಯಾವುದೇ ರಕ್ತದ ಕಲೆ, ಗಾಯದ ಗುರುತುಗಳಾಗಲೀ, ಇನ್ನಾವುದೇ ಕೊಲೆಯ ಕುರುಹುಗಳು ಕಾಣುತ್ತಿರಲಿಲ್ಲ ಎಂದು
ಉತ್ತರಿಸಿದರು. ಇದಕ್ಕೆ ಆಕ್ಷೇಪವೆತ್ತಿದ ಅರ್ನಬ್ ಗೋಸ್ವಾಮಿ, ಮರಣೋತ್ತರ ವರದಿ ಬರದೆ ಆತ್ಮಹತ್ಯೆ ಎಂದು ನೀವು ಹೇಗೆ ನಿರ್ಧರಿಸುತ್ತೀರಾ ಎಂದು ಮರುಪ್ರಶ್ನೆ ಹಾಕಿದರು. ಆಗಲೂ ತಡವರಿಸಿದ ಪೊಲೀಸ್ ಆಯುಕ್ತರು, ಈ ಬಗ್ಗೆಯೂ ನೋಡಲಾಗುತ್ತದೆ ಎಂದು ತಿಳಿಸಿದರು.
ದಕ್ಷ ಅಧಿಕಾರಿಯಾಗಿರುವ ಡಿ.ಕೆ. ರವಿ ಅವರು ರು. 100 ಕೋಟಿಗೂ ಅಧಿಕ ಮೊತ್ತದ ವಾಣಿಜ್ಯ ತೆರಿಗೆಯನ್ನು ಸರ್ಕಾರಕ್ಕೆ ವಂಚಿಸಿದ ಕಂಪನಿಗಳ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದ್ದ ಈ ಸಂದರ್ಭದಲ್ಲೇ ಇವರ ಸಾವು ಸಂಭವಿಸಿರುವುದು ಅನುಮಾನ ಹುಟ್ಟಿಸುವುದಿಲ್ಲವೇ ಎಂದು ಕೇಳಿದ್ದಕ್ಕೆ, ಈ ಬಗ್ಗೆಯೂ ತನಿಖೆ ನಡೆಸಲಿದ್ದೇವೆ. ಖಂಡಿತಾ ಎಲ್ಲ ರೀತಿಯ ತನಿಖೆಯಾಗಲೇಬೇಕು ಎಂದು ಎಂ.ಎನ್.ರೆಡ್ಡಿ ಹೇಳಿದರು.
Advertisement