
ವಿಧಾನಪರಿಷತ್ತು: ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಮಾ.31ರೊಳಗೆ ಚುನಾವಣಾ ಗುರುತಿನ ಚೀಟಿಯ ಪ್ರತಿ(ಎಪಿಕ್) ಸಲ್ಲಿಸದಿದ್ದಲ್ಲಿ
ಅಂಥ ಅರ್ಜಿಗಳನ್ನು ತಿರಸ್ಕರಿಸಲಾ ಗುವುದೆಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, `ಅರ್ಜಿದಾರರ ನೈಜತೆಯನ್ನು ಮೊದಲ ಹಂತದಲ್ಲಿ ದೃಡೀಕರಿಸುವ ಸಲುವಾಗಿ ಅರ್ಹ ಅರ್ಜಿದಾರದಿಂದ ಎಪಿಕ್ -ಯುಐಡಿ ಸಂಖ್ಯೆ ಸಂಗ್ರಹಿಸಲಾಗುತ್ತಿದೆ. ಆಧಾರ್ ಕಡ್ಡಾಯವಲ್ಲ. ಆದರೆ ಎಪಿಕ್ ಕಾರ್ಡ್ ಪ್ರತಿ ನೀಡುವುದು ಕಡ್ಡಾಯ' ಎಂದು ಸ್ಪಷ್ಟಪಡಿಸಿದರು ಪ್ರಸ್ತುತ 1,16,089 ಎಪಿಎಲ್ ಹಾಗೂ 13,23,996 ಬಿಪಿಎಲ್ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಅವುಗಳ ಪೈಕಿ
5,05,340 ಅರ್ಜಿದಾರರು ಮಾತ್ರ ತಮ್ಮ ಕುಟುಂಬದ ಅರ್ಹ ಸದಸ್ಯರ ಎಪಿಕ್ ಸಲ್ಲಿಸಿದ್ದಾರೆ. ಉಳಿದವರು ತಮ್ಮ ಎಪಿಕ್ ಸಂಖ್ಯೆಯ ಮಾಹಿತಿ ನೀಡಿದಲ್ಲಿ ಅಂಥ
ಅರ್ಜಿಗಳನ್ನು ಸಹ ಆದ್ಯತೆಯ ಮೇಲೆ ವಿಲೇವಾರಿ ಮಾಡಲಾಗುವುದು. ಮಾ.31ರೊಳಗೆ ಸಲ್ಲಿಸದಿದ್ದಲ್ಲಿ ಅಂಥ ಅರ್ಜಿ ತಿರಸ್ಕರಿಸಲಾಗುವುದು. ಮೇ 1ರಿಂದ ಮತ್ತೆ ಅರ್ಜಿ ಆಹ್ವಾನಿಸಲಾಗುವುದು. ಆಗ ಮತ್ತೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಡ್ ವಿತರಣೆ: ಫೆಬ್ರವರಿ ಅಂತ್ಯದವರೆಗೆ 2,09,606 ಎಪಿಎಲ್ ಹಾಗೂ 16,78,264 ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಇದುವರೆಗೆ ಎಪಿಎಲ್ ಮತ್ತು ಬಿಪಿಎಲ್‍ಗೆ ಒಟ್ಟು 39,23,607 ಅರ್ಜಿ ಸ್ವೀಕರಿಸಲಾಗಿದೆ. ಇದರಲ್ಲಿ 18,87,870 ಪಡಿತರ ಚೀಟಿ ವಿತರಿಸಲಾಗಿದೆ. 14,40,085 ಅರ್ಜಿ ಪರಿಶೀಲನೆಯ ಹಂತದಲ್ಲಿವೆ. 2,97,505 ಅರ್ಜಿಗಳು ನಾನಾ ಕಾರಣಗಳಿಂದ ತಿರಸ್ಕರಿಸಲ್ಪಟ್ಟಿವೆ. 2,98,147 ಪಡಿತರ ಚೀಟಿಗಳು ವಿತರಣೆಗೆ ಸಿದ್ಧಗೊಂಡಿದೆ ಎಂದು ತಿಳಿಸಿದರು.
ಹುದ್ದೆ ಭರ್ತಿ: ಇಲಾಖೆಯ ಕೆಲಸ ಸ್ವಲ್ಪ ಮಟ್ಟಿಗೆ ನಿಧಾನವಾಗಲು ಖಾಲಿ ಹುದ್ದೆಗಳು ಕಾರಣವಾಗಿದೆ. ಆದ್ದರಿಂದ ಈಗಾಗಲೇ ಇಲಾಖೆಯಲ್ಲಿ ಖಾಲಿ ಇರುವ ವಿವಿಧ 515 ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಲೋಕಸೇವಾ ಆಯೋಗವನ್ನು ಕೋರಲಾಗಿದೆ.
ಅವರು ಇನ್ನು ನಾಲ್ಕು ತಿಂಗಳಲ್ಲಿ ಈ ಎಲ್ಲಾ ಹುದ್ದೆ ಭರ್ತಿಮಾಡುವ ಭರವಸೆ ನೀಡಿದ್ದಾರೆ. ಇಲಾಖೆಯಲ್ಲಿರುವ ವಿವಿಧ ವೃಂದಗಳ 1399 ಹೊಸ ಹುದ್ದೆ ಸೃಜಿಸಲು ಸಹ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
Advertisement