
ಬೆಂಗಳೂರು : ಸರ್ಕಾರ ಮತ್ತು ರಾಜಭವನದ ಮಧ್ಯೆ ಸಿಕ್ಕಿಕೊಂಡಿದ್ದ ಕೆಪಿಎಸ್‍ಸಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಪ್ರಕ್ರಿಯೆಗೆ ಈಗ ಮತ್ತೊಂದು ತಿರುವು ಲಭಿಸಿದೆ.
ಸರ್ಕಾರ ಕಳುಹಿಸಿದ ಪಟ್ಟಿಯನ್ನು ಹಲವು ತಿಂಗಳ ಕಾಲ ತಮ್ಮ ಕಚೇರಿ ಯಲ್ಲೇ ಇರಿಸಿಕೊಂಡಿದ್ದ ರಾಜ್ಯಪಾಲ ವಜುಭಾಯ್ ರೂಡಾ ಭಾಯ್ ವಾಲಾ ಈಗ ನಾಲ್ಕು ಹೆಸರಿಗೆ ಮಾತ್ರ ಅಂಗೀಕಾರ ನೀಡಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಕಡತ ಕಳುಹಿಸಿದ್ದಾರೆ. ಆದರೆ ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡಿದ್ದ ವಿ.ಆರ್. ಸುದರ್ಶನ್ ಸೇರಿದಂತೆ ಇನ್ನೂ ನಾಲ್ವರ ಹೆಸರಿಗೆ ಅಂಗೀಕಾರ ವನ್ನೂ ನೀಡದೇ, ನಕಾರವನ್ನೂ ತೋರದೇ ವಿವಾದವನ್ನು ಜೀವಂತ ಇಟ್ಟಿದ್ದಾರೆ. ಬುಧವಾರ ಸಂಜೆ ರಾಜಭವನದಿಂದ ಅಂಗೀಕಾರಗೊಂಡ ಹೆಸರಿನ ಪಟ್ಟಿ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ರವಾನೆಯಾಗಿದ್ದು, ಗುಲ್ಬರ್ಗ ವಿವಿ ಕನ್ನಡ ಪ್ರಾಧ್ಯಾಪಕಿ ನಾಗಾಬಾಯಿ , ಸಾಮಾಜಿಕ ಕಾರ್ಯಕರ್ತ ರಘುನಂದನ್ ರಾಮಣ್ಣ, ಗೋವಿಂದಯ್ಯ, ನಿವೃತ್ತ ಐಎಎಫ್ ಎಸ್ ಅಧಿಕಾರಿ ಮೈಕಲ್ ಬೆನೆಟ್ಟಾ ಅವರನ್ನು ಕೆಪಿಎಸ್‍ಸಿ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಕಳುಹಿಸಿದ್ದ ಶಿಫಾರಸು ಪತ್ರಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೆ ಅಧ್ಯಕ್ಷ ಹುದ್ದೆಗೆ ಶಿಫಾರಸುಗೊಂಡಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಐಪಿಎಸ್ ಅ„ಕಾರಿ ಸೈಯದ್ ಉಲ್ಪತ್ ಹುಸೇನ್, ಡಾ,ರವಿಕುಮಾರ್, ಮೃತ್ಯುಂಜಯಸ್ವಾಮಿ ಅವರ ಹೆಸರಿನ ಬಗ್ಗೆ ಯಾವುದೇ ನಿಲುವು ವ್ಯಕ್ತ ಪಡಿಸದೇ ಕುತೂಹಲ ಮೂಡಿಸಿದ್ದಾರೆ. ಇದು ಸರ್ಕಾರವನ್ನು ಮತ್ತೊಮ್ಮೆಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ ಸರ್ಕಾರಿ ಮೂಲಗಳ ಪ್ರಕಾರ ರಾಜ್ಯಪಾಲರಿಗೆ ಸರ್ಕಾರ ನೀಡುವ ಶಿಫಾರಸನ್ನು ತಿರಸ್ಕರಿಸುವ ಅಧಿಕಾರ ಇಲ್ಲ. ಸುದರ್ಶನ್ ಅವರವಿರುದ್ಧ ವೇಮಗಲ್ ಮತ್ತು ಬೆಂಗಳೂರು ನಿವೇಶನ ವಿವಾದ ಸಂಬಂಧ ಸಲ್ಲಿಕೆ ಯಾಗಿದ್ದ 2 ದೂರುಗಳನ್ನು ಲೋಕಾಯುಕ್ತರು ವಜಾಗೊಳಿಸಿದ್ದಾರೆ. ಕಿರುಕುಳ
ನೀಡುವ ಉದ್ದೇಶ ದಿಂದಲೇ ಈ ದೂರು ಸಲ್ಲಿಕೆಯಾಗಿತ್ತು. ಲೋಕಾಯುಕ್ತರು ಕ್ಲೀನ್‍ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಕಡತವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಅವರು ಸದ್ಯದಲ್ಲೇ ಒಪ್ಪಿಗೆ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತವಾಗಿದೆ.
Advertisement