ಹಕ್ಕುಚ್ಯುತಿಗೆ ಹೆದರಲ್ಲ: ಸುರೇಶ್‍ಕುಮಾರ್
ಬೆಂಗಳೂರು: ಸರ್ಕಾರ ಬಡವರ ಮನೆ ಒಡೆಯುವಾಗ ಸುಮ್ಮನೆ ಕುಳಿತರೆ ನಮ್ಮ ಕರ್ತವ್ಯಕ್ಕೆ ಚ್ಯುತಿಯಾಗುತ್ತದೆ. ಹೀಗಾಗಿ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ಹಕ್ಕು ಚ್ಯುತಿ ಎಂಬ ಬೆದುರು ಬೊಂಬೆಗೆ ಹೆದರುವುದಿಲ್ಲ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಉಗ್ರಪ್ಪ ನೀಡಿರುವ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿರುವ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 15 ತಿಂಗಳು ನನ್ನ ಜತೆ ಒಂದೇ ವಾಡ್ರ್ ನಲ್ಲಿದ್ದ ಗೆಳೆಯ ಉಗ್ರಪ್ಪ ಹೋರಾಟದ ಹಾದಿಯಲ್ಲಿಯೇ ಬೆಳೆದು ಬಂದವರು. ಅವರ ಕಾನೂನು ಪಾಂಡಿತ್ಯದ ಬಗ್ಗೆ ನನಗೆ ಗೌರವ ಇದೆ. ಆದರೆ ಉಗ್ರಪ್ಪನವರಂಥ ಸಂವಿಧಾನ ತಜ್ಞರಿಗೆ ಕೆಲವೊಮ್ಮೆ ಮಾನವೀಯತೆ ಮರೆತು ಹೋಗುತ್ತದೆ ಎಂದು ವ್ಯಂಗ್ಯವಾಡಿದರು.
ಸದನ ಸಮಿತಿಯ ಗೌಪ್ಯ ವಿಚಾರವನ್ನು ನಾವು ಬಹಿರಂಗಗೊಳಿಸಿದ್ದೇವೆ. ಹೀಗಾಗಿ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಉಗ್ರಪ್ಪ ಹೇಳಿದ್ದಾರೆ. ಆದರೆ ಸದನ ಸಮಿತಿ ತನ್ನ ವರದಿ ನೀಡುವುದಕ್ಕೆ ಮುನ್ನ ಸರ್ಕಾರ ಒತ್ತುವರಿ ತೆರವು ಮಾಡಿರುವುದು ಹಕ್ಕುಚ್ಯುತಿ ಅಲ್ಲವೇ?
ಎಂದು ಪ್ರಶ್ನಿಸಿದರು.
ಉಗ್ರಪ್ಪನವರ ಕಾನೂನು ಪಾಂಡಿತ್ಯ ವಿವೇಚನೆ, ಮಾನವೀಯತೆಯನ್ನು ನುಂಗಿ ಹಾಕಬಾರದು. ಬಾಣಸವಾಡಿಯಲ್ಲಿ ಮನೆ ಒಡೆದಿದ್ದು ತಪ್ಪು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರೇ ಹೇಳಿದ್ದಾರೆ. ಅವರ ವಿರುದ್ಧವೂ ಉಗ್ರಪ್ಪ ಹಕ್ಕುಚ್ಯುತಿ ಮಂಡನೆ ಮಾಡುತ್ತಾರೆಯೇ? ಎಲ್ಲದಕ್ಕಿಂತ ಮಿಗಿಲಾಗಿ ವಿಧಾನಸಭಾಧ್ಯಕ್ಷರು ರಚಿಸಿದ ಸದನ ಸಮಿತಿಯ ಸದಸ್ಯರಾಗಿರುವ ನನ್ನ ವಿರುದ್ಧ ವಿಧಾನ ಪರಿಷತ್ ಸದಸ್ಯರಾದ ಉಗ್ರಪ್ಪ ಹಕ್ಕುಚ್ಯುತಿ ಮಂಡಿಸುತ್ತೇನೆಂದು ಬೆದುರುಬೊಂಬೆ ತೋರಿಸಿದರೆ ನಾವ್ಯಾರೂ ಹೆದರುವುದಿಲ್ಲ. ತಮ್ಮ ಕಾನೂನು ಜ್ಞಾನದ ಮಿತಿಯಲ್ಲಿ ಉಗ್ರಪ್ಪನವರು ಹಕ್ಕುಚ್ಯುತಿ ಮಂಡಿಸಿದರೆ ನಾವು ಜೈಲಿಗೆ ಹೋಗಲು ಸಿದ್ಧವೆಂದು ವ್ಯಂಗ್ಯವಾಡಿದರು.
ಉಪ್ಪು ಮತ್ತು ಎಣ್ಣೆ ಸಿಎಂ ಭಾವಚಿತ್ರ ಏಕೆ?
ಪಡಿತರ ವ್ಯವಸ್ಥೆ ಮೂಲಕ ವಿತರಿಸುವ ಉಪ್ಪು ಮತ್ತು ಎಣ್ಣೆ ಪ್ಯಾಕ್ ಮೇಲೆ ಮುದ್ರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವ ದಿನೇಶ್ ಗುಂಡೂರಾವ್ ಅವರ ಭಾವಚಿತ್ರ ತೆಗೆಯುವಂತೆ ಬಿಜೆಪಿ ಆಗ್ರಹಿಸಿದೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕರಾದ ಸುರೇಶ್ ಕುಮಾರ್ ಹಾಗೂ ಜಗದೀಶ್ ಕುಮಾರ್, ಗ್ರಾಮ ಪಂಚಾಯಿತಿ ಚುನಾವಣೆ ಮೇಲೆ ಈ ಭಾವಚಿತ್ರಗಳು ಪರಿಣಾಮ ಬೀರುತ್ತದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಮನವಿ ಮಾಡಲಾಗುವುದು ಎಂದರು. ಸಿಎಂ ಸಿದ್ದರಾಮಯ್ಯ ಅವರು ತಮಗೆ ಪ್ರಚಾರದ ಹುಚ್ಚು ಇಲ್ಲವೆಂದಿದ್ದಾರೆ. ಆದರೆ ಉಪ್ಪು ಮತ್ತು ಎಣ್ಣೆ ಮೇಲೆ ತಮ್ಮ ಭಾವಚಿತ್ರವನ್ನು ಮುದ್ರಿಸಿಕೊಂಡು ಮತದಾರನ ಅಡುಗೆಮನೆವರೆಗೂ ತೆರಳಿ `ನಾನು ಕೊಟ್ಟಿದ್ದು' ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ಇದು ಪ್ರಚಾರ ಪ್ರಿಯತೆಯ ಉತ್ತುಂಗಾವಸ್ಥೆ ಎಂದು ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ