ಯಡಿಯೂರಪ್ಪಗೆ ಟೀಕೆ ಸಹಿಸಲು ಆಗುತ್ತಿಲ್ಲ: ಸಿಎಂ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳನ್ನು ಸಹಿಸಿಕೊಳ್ಳಲು ಯಡಿಯೂರಪ್ಪ ಅವರಿಂದ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳನ್ನು ಸಹಿಸಿಕೊಳ್ಳಲು ಯಡಿಯೂರಪ್ಪ ಅವರಿಂದ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮಂಗಳವಾರ ಸಂಜೆ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಟೀಕಿಸಿದ್ದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳನ್ನು ಸಹಿಸಿಕೊಳ್ಳಲು ಯಡಿಯೂರಪ್ಪ ಅವರಿಂದ ಆಗಿಲ್ಲ. ಅಲ್ಲದೆ ನಾನು ಹೇಳಿರುವುದು ಸಹ ಸತ್ಯ ಸಂಗತಿಯನ್ನೇ. ಇದು ಅವರಿಗೆ ಅದೇನೊ ಹೇಳ್ತಾರಲ್ಲ, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಆಗಿದೆ.

ಸರ್ಕಾರದ ಸಾಧನೆ ಕುರಿತು ಪುಸ್ತಕ ಹೊರತಂದಿದ್ದೇವೆ. ಅಲ್ಲದೆ ಸಮಾವೇಶದಲ್ಲಿಯೂ ಹೇಳಿದ್ದೇವೆ. ಜೊತೆಗೆ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಮತ್ತು ದೆಹಲಿಯ ಬಿಜೆಪಿ ಸರ್ಕಾರವನ್ನೂ ಟೀಕಿಸಿದ್ದೇನೆ. ಪ್ರಸ್ತುತ ವಿಷಯ ಹೊರತುಪಡಿಸಿ ವೈಯಕ್ತಿಕವಾಗಿ ಯಾರನ್ನೂ ನಾನು ಟೀಕಿಸಿಲ್ಲ. ಇಷ್ಟಕ್ಕೂ ಯಡಿಯೂರಪ್ಪ ಅವರು ಅನ್ನಭಾಗ್ಯವನ್ನು ದೇಶವ್ಯಾಪಿ ವಿಸ್ತರಿಸಬೇಕು ಎಂದು ಹೇಳುವ ಮೂಲಕ ಒಳ್ಳೆಯ ಮಾತನಾಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.

ಲೋಕಾಯುಕ್ತರಿಗೆ ಉತ್ತರಿಸಿದ್ದೇನೆ: ಅರ್ಕಾವತಿ ಡಿ ನೋಟಿಫಿಕೇಷನ್‍ಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿತ್ತು. ಅದಕ್ಕೆ ಉತ್ತರಿಸಿದ್ದೇನೆ. ಏನೆಂದು ಉತ್ತರಿಸಿದ್ದೇನೆ ಎನ್ನುವುದು ಅನಗತ್ಯ. ಚೀನಾ ಮತ್ತು ಕರ್ನಾಟಕ ರಾಜ್ಯದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಒಡಂಬಡಿಕೆ ಮಾಡಿಕೊಂಡಿರುವುದು ಸ್ವಾಗತಾರ್ಹ. ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಆದರೆ ತಡವಾಗಿ ಆಹ್ವಾನ ಬಂದಿದ್ದರಿಂದ ಹೋಗಲು ಸಾಧ್ಯವಾಗಲಿಲ್ಲ.

ಅಲ್ಲದೆ ರಾಜ್ಯದಲ್ಲಿ ಗ್ರಾಪಂ ಚುನಾವಣೆ ಮತ್ತು ಬಿಬಿಎಂಪಿ ಚುನಾವಣೆ ಹತ್ತಿರಕ್ಕೆ ಬಂದಿತ್ತು. ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ದೇಶಕ್ಕೆ ಹೂಡಿಕೆ ಬಂದರೆ ರಾಜ್ಯಕ್ಕೆ ಬಂದಂತೆ ಅಲ್ಲವೆ? ಸಚಿವ ರೋಷನ್ ಬೇಗ್ ಅವರ ಪುತ್ರನ ಭಾವಚಿತ್ರ ಯಾವುದೇ ಪೋಸ್ಟರ್‍ಗಳಲ್ಲಿ ಇಲ್ಲ. ಅದು ಸುಳ್ಳು. ಸರ್ಕಾರಿ ಜಾಹೀರಾತಿನಲ್ಲಿ ಹೇಗೆ ಅವರ ಭಾವಚಿತ್ರ ಬರಲು ಸಾಧ್ಯ? ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ನಾನೇ ಕರೆದು ಹೇಳುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com