
ಬೆಂಗಳೂರು: ರಾಜ್ಯಪಾಲ ವಜುಬಾಯಿವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶನಿವಾರ ಆಗ್ರಹಿಸಿದರು.
ಲಾಟರಿ ದಂಧೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಿಐಡಿ ಪೊಲೀಸರು ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿ ನಂತರ ನಿನ್ನೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಅಕ್ರಮ ಲಾಟರಿಯೇ ನಡೆಯುತ್ತಿಲ್ಲ ಎಂದು ದಂಧೆಯನ್ನು ರಕ್ಷಿಸುತ್ತಿದ್ದ ಗೃಹ ಸಚಿವರಿಗೆ ಇನ್ನಾದರೂ ನಾಚಿಕೆ ಇದ್ದರೆ ರಾಜಿನಾಮೆ ಕೊಡಲಿ ಅಥವಾ ಇವರನ್ನು ಮುಖ್ಯಮಂತ್ರಿಯವರು ರಕ್ಷಿಸುತ್ತಾರೆಂದರೆ ಈ ದಂಧೆಯಲ್ಲಿ ಅವರಿಗೂ ಪಾಲಿದೆ ಎಂದೇ ಭಾವಿಸಬೇಕಾಗುತ್ತದೆ ಎಂದು ಹೇಳಿದರು.
ಇನ್ನು ಎರ್ಕಾಡ್‍ನ ಎರಡು ಗೆಸ್ಟ್ ಹೌಸ್‍ನಲ್ಲಿ ಹಿರಿಯ ಪೊಲೀಸರಿಗೆ ಆತಿಥ್ಯ ಏಕೆ ನಡೆಯುತ್ತಿತ್ತೆಂಬುದು ಈಗ ಸ್ಪಷ್ಟವಾಗಿದೆ. ನಾನು ಒಂದೂವರೆ ವರ್ಷದ ಹಿಂದೆಯೇ ಈ ಪ್ರಕರಣದ ಬಗ್ಗೆ ಗಮನ ಸೆಳೆದರೆ, ನಾನು ಉಡಾಫೆಯಾಗಿ ಮಾತನಾಡುತ್ತೇನೆಂದು ಟೀಕಿಸಿದರು. ಈಗ ಎಲ್ಲವೂ ಬಹಿರಂಗವಾಗುತ್ತಿದೆ. ಪಾರಿರಾಜನ್ ಬೆಂಗಳೂರಿನಲ್ಲಿ 300ಕ್ಕೂ ಹೆಚ್ಚು ದ್ವಿಚಕ್ರ ವಾಹನ ಇಟ್ಟುಕೊಂಡಿದ್ದು, ಯುವಕರನ್ನು ಬಳಸಿಕೊಂಡು ವಸೂಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದ.
ಪ್ರತಿ ದಿನ ರು. 3-4 ಕೋಟಿ ವ್ಯವಹಾರ ನಡೆಯುತ್ತಿದೆ. ವರ್ಷದಲ್ಲಿ ಸಾವಿರಾರು ಕೋಟಿ ವ್ಯವಹಾರವಾಗುತ್ತದೆ. ಉಪ್ಪಾರ ಠಾಣೆಯ ಹಿಂಭಾಗವೇ ರಾಜಾರೋಷವಾಗಿ ದಂಧೆ ನಡೆಯುತ್ತದೆ. ಇದೆಲ್ಲಾ ಗೊತ್ತಿಲ್ಲದೇ ಆಗುತ್ತದೆ. ಇದರಲ್ಲಿ ಯಾರೆಲ್ಲರ ಪಾಲಿದೆ ಎಂಬುದು ಬಹಿರಂಗವಾಗಬೇಕು, ಈ ಕಾರಣಕ್ಕಾಗಿಯೇ ಪ್ರಕರಣ ಸಿಐಡಿ ಬದಲು ಸಿಬಿಐಗೆ ವಹಿಸಬೇಕೆಂದು ಮೊದಲಿಂದಲೂ ಹೇಳುತ್ತಾ ಬಂದಿದ್ದೇನೆ ಎಂದರು.
Advertisement