ಹಗರಣ ಮುಚ್ಚಲು ರು. 100 ಕೋಟಿ ಬೇಡಿಕೆ: ಕುಮಾರಸ್ವಾಮಿ ಆರೋಪ
ಬೆಂಗಳೂರು: 'ಬಹುಕೋಟಿ ಲಾಟರಿ ಹಗರಣದ ಅಕ್ರಮಗಳು ಸಿನಿಮೀಯ ಮಾದರಿಯಲ್ಲಿ ನಡೆದಿದ್ದು, ಇದನ್ನು ಮುಚ್ಚಿ ಹಾಕಲು ರಾಜ್ಯದ ಪ್ರಮುಖ ಅಧಿಕಾರದಲ್ಲಿರುವವರ ಪುತ್ರ ರು. 100 ಕೋಟಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ವಿಧಾನಪರಿಷತ್ ಸದಸ್ಯರೊಬ್ಬರು ಸಾರಥ್ಯ ವಹಿಸಿದ್ದರು'- ಇಂಥದೊಂದು ಆರೋಪವನ್ನು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, `ಹಗರಣವನ್ನು ಮುಚ್ಚಿ ಹಾಕಿಸಲು ಆರೋಪಿ ಪಾರಿ ರಾಜನ್‍ಗೆ ರು.100 ಕೋಟಿ ಬೇಡಿಕೆ ಇಟ್ಟಿದ್ದವರು ರಾಜ್ಯದ ಪ್ರಮುಖ ಅಧಿಕಾರದಲ್ಲಿರುವವರ ಪುತ್ರ. ಇವರು ಮೈಸೂರು, ಬೆಂಗಳೂರು ಎರಡೂ ಕಡೆಯೂ ವ್ಯವಹಾರ ನಡೆಸಿದ್ದಾರೆ. ಈ ಪ್ರಕಣರಣದಲ್ಲಿ ವಿಧಾನಪರಿಷತ್ ಸದಸ್ಯರೊಬ್ಬರು ಪ್ರಮುಖ ಪಾತ್ರವಹಿಸಿದ್ದಾರೆ. ಇವರು ಎಸ್‍ಪಿಜಿ (ಈ ಹಿಂದೆ ಕುಮಾರಸ್ವಾಮಿ ಹೇಳಿದಂತೆ ಸಿದ್ದರಾಮಯ್ಯ ಪ್ರೋಟೆಕ್ಷನ್ ಗ್ರೂಪ್) ಗುಂಪಿನ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇಷ್ಟೆ ಅಲ್ಲದೆ ಮಂತ್ರಿಗಳು, ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿದ್ದು, ಇದೆಲ್ಲವೂ ತನಿಖೆಯಿಂದಷ್ಟೇ ಬಯಲಾಗಬೇಕಿದೆ' ಎಂದು ಹೇಳಿದರು.
ಯಾವೆಲ್ಲಾ ಅಧಿಕಾರಿಗಳು ಭಾಗಿ?: ಲಾಟರಿ ದಂಧೆ ಹಣ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಪ್ರಕರಣ ಬಯಲಾಗಿದ್ದು, ಆನಂತರ `ಸುವರ್ಣ ನ್ಯೂಸ್' ಚಾನಲ್‍ನಲ್ಲಿ ಸ್ಟಿಂಗ್ ಆಪರೇಷನ್ ನಡೆದಿದೆ. ಮಾ.6ರಂದು ಚಾನಲ್‍ನಲ್ಲಿ ಸುದ್ದಿ ಬಿತ್ತರವಾದ ನಂತರವಾದರೂ ಸರ್ಕಾರ ಯಾವೊಬ್ಬ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಲಿಲ್ಲ. ಅಂದರೆ ಸುದ್ದಿ ಪ್ರಕಟವಾಗಿ ಒಂದೂವರೆ ತಿಂಗಳಾದರೂ ಕ್ರಮಕೈಗೊಳ್ಳದೆ ಆರೋಪಿಗಳನ್ನು ಮರೆ ಮಾಚುವ ಮತ್ತು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿತ್ತು. ಇದರಲ್ಲಿ ಮುಂದಾಳತ್ವ ವಹಿಸಿದ್ದ ವಿಧಾನ ಪರಿಷತ್ ಸದಸ್ಯರು ಮತ್ತು ಪಾರಿರಾಜನ್ ಮಂತ್ರಿಗಳನ್ನೂ ಭೇಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯ ಬಣ್ಣ ಬಯಲು ಮಾಡುವ ಎಚ್ಚರಿಕೆ
ಹಗರಣದಲ್ಲಿ ಮಂತ್ರಿಗಳು, ವಿಧಾನಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ. ಲಾಟರಿ ನಿಷೇಧ ದಳ ಐಜಿಪಿಗಳಾಗಿದ್ದ ಅರುಣ್ ಚಕ್ರವರ್ತಿ, ಸುನಿಲ್ ಅಗರ್‍ವಾಲ್‍ಗೆ ಅವರಿಗೆ ಲಾಟರಿ ದಂಧೆ
ಲಂಚ ಹಂಚಿಕೆಯಾಗಿದ್ದು, ಒಟ್ಟು 35 ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದನ್ನು ಜೆಡಿಎಸ್ ಬಯಲಿಗೆ ಎಳೆದಿದ್ದು, ಬಿಜೆಪಿ ನಾಯಕರು ನಮಗಿಂತಲೂ ಶರವೇಗದಲ್ಲಿ ಹೋಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಹೇಳಿದ್ದೇ ಆದರೆ ನಾನು ಹಿಂದಿನ ಸರ್ಕಾರದಲ್ಲಿ ನಡೆದಿರುವ ಲಾಟರಿ ದಂಧೆಯನ್ನೂ ಹೊರ ತೆಗೆಯುತ್ತೇನೆ ಎಂದು ಸವಾಲು ಎಸೆದರು.
ನಾನಿದ್ದಾಗ ಲಾಟರಿ ನಿಷೇಧವಾಯಿತು
ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಲಾಟರಿಯನ್ನು ನಿಷೇಧಿಸಲಾಯಿತು. ಆನಂತರ ಮುಂದಿನ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಷೇಧದ ನಡುವೆಯೂ ಒಂದಂಕಿ ಲಾಟರಿ ದಂಧೆ ನಡೆಯುತ್ತಿತ್ತು. ಈ ಬಗ್ಗೆ ನಾನು ಅನೇಕ ಬಾರಿ ಪ್ರಸ್ತಾಪಿಸಿದ್ದೆ. ಸದನದಲ್ಲೂ ಚರ್ಚೆ ಮಾಡಿದ್ದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಾರ್ಜ್ ಅಲಕ್ಷ್ಯ ಮಾಡಿದ್ದರು. ಆದರೆ, ಈ ದಂಧೆಯಲ್ಲಿ ಸಿಗುತ್ತಿದ್ದ ಹಣ ಹಂಚಿಕೆ ಮತ್ತು ಅಧಿಕಾರಿಗಳ ಅಸಮಾಧಾನದಿಂದ ಹಗರಣ ತಾನಾಗಿಯೇ ಬಯಲಾಯಿತು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಟ್ಟು ಹೇಳಿದ್ದೇನು?
* ಲಾಟರಿ ನಿಷೇಧ ದಳದ ಎಸ್ಪಿ ಧರಣೇಶ್ ಮತ್ತು ಐಜಿಪಿ ಅರುಣ್ ಚಕ್ರವರ್ತಿ ಅವರಿಗೆ ರು. 30 ಲಕ್ಷ ಸಂದಾಯವಾಗಿದೆ.
* 2014ರಲ್ಲಿ ಲಾಟರಿ ದಂಧೆ ಎಂದಿನಂತೆ ಎಗ್ಗಿಲ್ಲದೆ ನಡೆಯುತ್ತಿತ್ತು. ಪಾರಿ ರಾಜನ್ ಇದರ ಏಜೆಂಟ್. ಈತನಿಂದ ಕೋಲಾರದಲ್ಲಿ ಸಾಮಾನ್ಯ ಪೇದೆ ಮಂಜುನಾಥ್ ಎಂಬುವವರು ಆಗಾಗ ಹಣ ಪಡೆಯುತ್ತಿದ್ದರು.
* ಒಮ್ಮೆ ಪೇದೆ ಮಂಜುನಾಥ್, ಲಾಟರಿ ನಿಷೇಧ ಜಾಗ್ರತ ದಳದ ಪೇದೆಗಳಾದ ಸಿಂಗ್ ಮತ್ತು ಮಂಜುನಾಥ್‍ಗೆ ಪಾರಿ ರಾಜನ್ ಬಗ್ಗೆ ಮಾಹಿತಿ ನೀಡಿದರು.
* ಬಳಿಕ ಈ ವಿಷಯ ವಿಚಾರ ದಳದಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿದ್ದ ರಾಮಪ್ಪ ಗುತ್ತೆದಾರ್ ಗಮನಕ್ಕೆ ಹೋಯಿತು.
* ಎಲ್ಲರೂ ಸೇರಿ ಪಾರಿ ರಾಜನ್ ಬಂಧಿಸಿ, ವಿಚಾರಣೆ ಆರಂಭಿಸಿದರು. ಅಲ್ಲಿಂದ ಅಕ್ರಮ ಆರಂಭವಾಯಿತು.
* ವಿಚಾರಣೆ ವೇಳೆ ಪಾರಿ ರಾಜನ್ ತಮಗಿಂತಲೂ ದೊಡ್ಡ ನಾಯಕ ಇದ್ದಾನೆ ಎಂದು `ಮಾರ್ಟಿನ್' ವಿಚಾರ ಬಾಯಿ ಬಿಟ್ಟಿದ್ದನು. ಅಷ್ಟೇ ಅಲ್ಲ. ಆತನಿಂದ ಹಣ ಕೊಡಿಸುವುದಾಗಿಯೂ ಹೇಳಿದ್ದ.
* ರಾಮಪ್ಪ ಗುತ್ತೆದಾರ್ ಸಲಹೆಯಂತೆ ಜಾಗ್ರತ ದಳದ ಪೇದೆಗಳಾದ ಸಿಂಗ್ ಮತ್ತು ಮಂಜುನಾಥ್ ಕ್ವಾಲಿಸ್ ಕಾರಿನಲ್ಲಿ ಚೆನ್ನೈಗೆ ಹೋಗಿ `ಮಾರ್ಟಿನ್' ಭೇಟಿ ಮಾಡಿ ರು. 40 ಲಕ್ಷ ಲಂಚ ತಂದರು.
* ಈ ರು. 40 ಲಕ್ಷಗಳಲ್ಲಿ ಪೇದೆಗಳಾದ ಸಿಂಗ್ ಮತ್ತು ಮಂಜುನಾಥ್ ಅವರಿಗೆ ತಲಾ ರು. 2ಲಕ್ಷ ಹಂಚಿಕೆಯಾಗಿದೆ. ಸಬ್ ಇನ್ಸ್‍ಪೆಕ್ಟರ್ ರಾಮಪ್ಪ ಗುತ್ತೆದಾರ್‍ಗೆ ರು5 ಲಕ್ಷ ನೀಡಲಾಗಿದೆ. ಇನ್ನುಳಿದ ರು. 30 ಲಕ್ಷ ಲಾಟರಿ ನಿಷೇಧ ದಳ ಎಸ್ಪಿ ಧರಣೇಶ್ ಮತ್ತು ಐಜಿಪಿ ಅರುಣ್ ಚಕ್ರವರ್ತಿ ಅವರಿಗೆ ಹಂಚಿಕೆಯಾಗಿರುವ ಸಾಧ್ಯತೆ ಇದೆ.
ಐಜಿಪಿ ಅಗರ್‍ವಾಲ್‍ಗೆ ರು. 60ಲಕ್ಷ.
* ಲಾಟರಿ ನಿಷೇಧ ದಳದ ಮತ್ತೊಂದು ವಿಭಾಗದ ಐಜಿಪಿ ಸುನಿಲ್ ಅಗರ್‍ವಾಲ್ ಅವರಿಗೂ ಈ ದಂಧೆಯಿಂದ ಸುಮಾರು ರು. 60ಲಕ್ಷ ಸಂದಾಯವಾಗಿದೆ.
* ಇತ್ತೀಚೆಗೆ ಅಗರ್‍ವಾಲ್ ಉತ್ತರಪ್ರದೇಶಕ್ಕೆ ಹೋಗಿದ್ದರು. ಆಗ ಲಾಟರಿ ದಂಧೆ ಕಿಂಗ್‍ಪಿನ್ ಮಾರ್ಟಿನ್ ನೇರವಾಗಿ ಭೇಟಿ ನೀಡಿ ಹಣ ತಲುಪಿಸಿದ್ದಾರೆ.
* ಈ ಎಲ್ಲಾ ವಿಚಾರಗಳನ್ನು ಜಾಗ್ರತ ದಳದ ಮತ್ತೊಂದು ವಿಭಾಗದ ಎಸ್ಪಿ ಚಂದ್ರಕಾಂತ್‍ಗೆ ಪೇದೆಯೊಬ್ಬ ತಿಳಿಸಿದರು. ಆಗ ಚಂದ್ರಕಾಂತ್, ಎಸ್ಪಿ ಧರಣೇಶ್ ಸ್ಥಾನಕ್ಕೆ ಬರಲು ಯತ್ನಸಿದರು. ಇದು ಸಾಧ್ಯವಾಗಲಿಲ್ಲ. ಆಗ ಚಂದ್ರಕಾಂತ್ ಲಾಟರಿ ದಂಧೆಯನ್ನು ಬಯಲು ಮಾಡಿದರು.