ಕಾಂಗ್ರೆಸ್‍ನಲ್ಲಿ ಅಸಮಾಧಾನ: ನಾಳೆ ಸಿಎಲ್‍ಪಿಯಲ್ಲಿ ಸ್ಫೋಟ ಸಂಭವ

ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ. ಅಡಿ ಪದಚ್ಯುತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತಕೂಟ ನಡೆಸಿರುವ ಕಸರತ್ತುಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹಾಗೂ ....
ಸಿದ್ದರಾಮಯ್ಯ
ಸಿದ್ದರಾಮಯ್ಯ

ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ. ಅಡಿ ಪದಚ್ಯುತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತಕೂಟ ನಡೆಸಿರುವ ಕಸರತ್ತುಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹಾಗೂ ಆಕ್ರೋಶ ಮಡುಗಟ್ಟಿದೆ. ಕೆಲವೇ ಕೆಲವು ವ್ಯಕ್ತಿಗಳ ತೀರ್ಮಾನವನ್ನು ಇಡೀ ಪಕ್ಷದ ಇಲ್ಲವೇ ಸರ್ಕಾರದ ತೀರ್ಮಾನವೆಂಬಂತೆ ಬಿಂಬಿಸಲು ನಡೆಸುತ್ತಿರುವ ಪ್ರಯತ್ನಗಳಿಗೂ ಆಕ್ಷೇಪಗಳು ಪಕ್ಷದೊಳಗೆ ವ್ಯಕ್ತವಾಗುತ್ತಿವೆ.

ಆದರೆ, ಈ ನಡೆ ಬಗ್ಗೆ ಕೆಲವು ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ತಮ್ಮ ಅಭಿಪ್ರಾಯವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಿಳಿಸಿದ್ದಾರೆ. ಪಕ್ಷದ ಈ ನಡೆಯಿಂದ ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಇದು ಸರ್ಕಾರದ ವರ್ಚಸ್ಸಿಗೂ ಧಕ್ಕೆ ಆಗುತ್ತಿದೆ. ತಮ್ಮ ಆಪ್ತ ಕೂಟದ ಮಾತು ಕೇಳಿಕೊಂಡು ಇಂಥ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ಮನವರಿಕೆ ಮಾಡಿಕೊಟ್ಟರೂ ಅದಕ್ಕೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ.

ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಪದಚ್ಯುತಿ ಪ್ರಕ್ರಿಯೆ ನಡೆಯತ್ತಿರುವ ಸಂದರ್ಭದಲ್ಲಿ ಏಕಾಏಕಿ ಉಪ ಲೋಕಾಯುಕ್ತರ ಪದಚ್ಯುತಿ ಬೇಕಿರಲಿಲ್ಲ. ಇದರಿಂದ ಪಕ್ಷದ ಬಗ್ಗೆ ಮತ್ತು ಸರ್ಕಾರದ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಪಕ್ಷದ ಕೆಲವು ಶಾಸಕರು ಅಸಮಾಧಾನಗೊಂಡಿದ್ದಾರೆ.

ಈ ವಿಚಾರವನ್ನು ಶಾಸಕರ ಸಭೆಯಲ್ಲೇ ಪ್ರಸ್ತಾಪಿಸಲು ಸಿದ್ದರಿದ್ದರು. ಆದರೆ ಸೋಮವಾರ ಕರೆಯಲಾಗಿದ್ದ ಶಾಸಕರ ಸಭೆಯನ್ನು ಕೇವಲ ಪದಚ್ಯುತಿಗೆ ಸಂಬಂಧಿಸಿದ ಸಹಿ ಸಂಗ್ರಹಕ್ಕೆ ಮಾತ್ರ ಸೀಮಿತಗೊಳಿಸಿದ್ದರಿಂದ ಶಾಸಕರ ಅಸಮಾಧಾನ ವ್ಯಕ್ತಗೊಳಿಸಲು ಅವಕಾಶ ಸಿಕ್ಕಿಲ್ಲ. ಆದ್ದರಿಂದ ಬುಧವಾರ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಈ ವಿಚಾರ ಸ್ಫೋಟವಾಗುವ ಸಾಧ್ಯತೆ ಹೆಚ್ಚಾಗಿದೆ. ನ್ಯಾ.ಸುಭಾಷ್ ಅಡಿ ಪದಚ್ಯುತಿ ವಿಚಾರವನ್ನೇ ಮುಖ್ಯವಾಗಿಟ್ಟುಕೊಂಡು ಶಾಸಕಾಂಗ ಪಕ್ಷದ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಅನೇಕ ಶಾಸಕರ ತಮ್ಮ ಅತೃಪ್ತಿ ಹೊರ ಹಾಕುವವರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಉಪ ಲೋಕಾಯುಕ್ತ ಪದಚ್ಯುತಿಯಂಥ ಮಹತ್ವದ ನಿರ್ಣಯದ ಬಗ್ಗೆ ಪಕ್ಷದ ಪ್ರಸ್ತಾಪ ಸಲ್ಲಿಸುವಾಗ ಶಾಸಕರ ಅಭಿಪ್ರಾಯ ಕೇಳಬೇಕಿತ್ತು. ರಾತ್ರೋರಾತ್ರಿ ನಿರ್ಧಾರ ಕೈಗೊಂಡು ಅದನ್ನು ಶಾಸಕರ ಮೇಲೆ ಹೇರಿದ್ದು ಸರಿಯಲ್ಲ. ಅದರಲ್ಲೂ ಮುಖ್ಯಮಂತ್ರಿಗಳ ಅಪ್ತ ವಲಯದ ನಿರ್ಧಾರಗಳನ್ನು ಎಲ್ಲಾ ಶಾಸಕರ ಮೇಲೆ ಹೇರಿದನ್ನು ಒಪ್ಪಿಕೊಳ್ಳಲಾಗದು. ಸೋಮವಾರ ಸಹಿ ಸಂಗ್ರಹ ಅವಸರವಿದ್ದ ಕಾರಣ ಪಕ್ಷಕ್ಕೆ ಮುಖಭಂಗ ಆಗಬಾರದು ಎಂದು ಅನೇಕ ಶಾಸಕರು ಸಹಿ ಹಾಕಿದ್ದಾರೆ. ಇಲ್ಲವಾದರೆ ಪದಚ್ಯುತಿ ಪ್ರಸ್ತಾವಕ್ಕೆ ಯಾರೂ ಒಪ್ಪುತ್ತಿರಲಿಲ್ಲ. ಆದ್ದರಿಂದ ಮಂಗಳವಾರ ಕೆಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಪ್ರಸ್ತಾವವನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

ಉಪ ಲೋಕಾಯುಕ್ತ; ಮುಂದೇನು?

ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಪದಚ್ಯುತಿ ವಿಷಯ ಈಗ ಸ್ವೀಕರ್ ಕಾಗೋಡು ತಿಮ್ಮಪ್ಪ ಅಂಗಳದ ಚೆಂಡಾಗಿದೆ. ಲೋಕಾಯುಕ್ತ ಭಾಸ್ಕರ್‍ರಾವ್ ಪದಚ್ಯುತಿಗೆ ಸ್ವೀಕೃತವಾಗಿರುವ ಮಾದರಿಯಲ್ಲೇ ಉಪ ಲೋಕಾಯುಕ್ತ ಪದಚ್ಯುತಿ ಪ್ರಸ್ತಾವ ಕೂಡ ಸ್ವೀಕೃತವಾಗಿದೆ. ಆದರೆ ಉಪ ಲೋಕಾಯುಕ್ತ ಮುಂದುವರಿಸುವುದು ಇಲ್ಲವೇ ಬಿಡುವುದು ಈಗ ಸ್ಪೀಕರ್ ಕೈಯಲ್ಲಿದೆ. ಅಂದರೆ ಲೋಕಾಯುಕ್ತ ಭಾಸ್ಕರ್‍ರಾವ್ ಪದಚ್ಯುತಿ ಬಗ್ಗೆ ಈಗಾಗಲೇ ಸರ್ವಪಕ್ಷಗಳು ನಾಯಕರು, ಉಭಯ ಸದನಗಳ ಪೀಠಾಧೀಶಕರ ಸಮ್ಮುಖದಲ್ಲಿ ಚರ್ಚೆಯಾಗಿದೆ. ಕಾನೂನು ಸಲಹೆಗಳು ಮುಗಿದೆ. ಎಸ್ ಐಟಿಯಂಥ ತನಿಖಾ ಸಂಸ್ಥೆಯಿಂದ ಸಾಕಷ್ಟು ದಾಖಲೆ ಮತ್ತು ಮಾಹಿತಿಗಳನ್ನು ಪಡೆಯಲಾಗಿದೆ. ಹಾಗೆಯೇ ಇದಕ್ಕೆ ಸರ್ಕಾರದಿಂದಲೂ ಪೂರಕ ಬೆಂಬಲ ಸಿಕ್ಕಿದೆ. ಆದ್ದರಿಂದ ಭಾಸ್ಕರ್‍ರಾವ್ ಪದಚ್ಯುತಿ ಕುರಿತು ಸ್ವೀಕರ್ ಮತ್ತು ಸಭಾಪತಿ ಅವರು ಪ್ರಸ್ತಾವ ಸಿದ್ಧಪಡಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಸಲ್ಲಿಸಲಿದ್ದಾರೆ. ಆದರೆ, ಉಪ ಲೋಕಾಯುಕ್ತ ನ್ಯಾ.ಅಡಿ ಪದಚ್ಯುತಿ ಬಗ್ಗೆ ಅಂಥ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ನ್ಯಾ.ಅಡಿ ಅವರ ವಿರುದ್ಧ ಆರೋಪಗಳ ಬಗ್ಗೆ ತನಿಖೆಗಳು ನಡೆಯಬೇಕು. ಅದೆಲ್ಲ ಸಂಗ್ರಹಿಸಿ ಸಾಕ್ಷ್ಯಾಧಾರ ಮತ್ತು ಮಾಹಿತಿಗಳನ್ನು ಸಭಾಧ್ಯಕ್ಷರಿಗೆ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಅದರಲ್ಲಿ ಅಕ್ರಮ ಮತ್ತು ಅಧಿಕಾರ ದುರ್ಬಳಕೆ ಸಾಬೀತಾಗುವ ಅಂಶಗಳಿದ್ದರೆ ಮಾತ್ರ ಸಭಾಧ್ಯಕ್ಷರು ಸಿದ್ಧಪಡಿಸುತ್ತಾರೆ. ಅದನ್ನು ಯಥಾಪ್ರಕಾರ ಮುಖ್ಯನ್ಯಾಯಮೂರ್ತಿಗೆ ಸಲ್ಲಿಸುತ್ತಾರೆ. ಒಂದೊಮ್ಮೆ ಕಾಂಗ್ರೆಸ್ ಎತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಮತ್ತು ದಾಖಲೆಗಳು ಲಭ್ಯವಾಗದಿದ್ದರೆ ಸಭಾಧ್ಯಕ್ಷರು ಪ್ರಸ್ತಾವ ಸಿದ್ಧಪಡಿಸುವುದಿಲ್ಲ. ಅದು ಮುಖ್ಯ ನ್ಯಾಯಮೂರ್ತಿವರೆಗೂ ಹೋಗುವ ಪ್ರಶ್ನೆಯೂ ಬರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com