ಮಾನಸಿಕ ತಜ್ಞರಿಂದ ಚಿಕಿತ್ಸೆ ಪಡೆಯಿರಿ: ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸಲಹೆ

ಗಾಂಧಿ ಹುಟ್ಟಿದ ನಾಡಿನಲ್ಲಿ ನರೇಂದ್ರ ಮೋದಿ ಹುಟ್ಟಿದ್ದು ವಿಪರ್ಯಾಸ ಎಂಬ ಸಿಎಂ ಸಿದ್ದರಾಮಯ್ಯನವರ ಟೀಕೆಗೆ ರಾಜ್ಯ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಗಾಂಧಿ ಹುಟ್ಟಿದ ನಾಡಿನಲ್ಲಿ ನರೇಂದ್ರ ಮೋದಿ ಹುಟ್ಟಿದ್ದು ವಿಪರ್ಯಾಸ ಎಂಬ ಸಿಎಂ ಸಿದ್ದರಾಮಯ್ಯನವರ ಟೀಕೆಗೆ ರಾಜ್ಯ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ವೇಳೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ವಿರುದ್ಧ ಟೀಕಿಸಿದ್ದರು. ಗಾಂಧಿ ಜಯಂತಿಯ ದಿನ ಅವರ ಆದರ್ಶ ಮತ್ತು ಮೌಲ್ಯಗಳನ್ನು ಸ್ಮರಿಸಿ ಅವರ ಹಾದಿಯಲ್ಲಿ ಹೋಗಲು ಪ್ರಯತ್ನ ಮಾಡಲು ತಮ್ಮ ಪಕ್ಷದ ಕಾರ್ಯಕರ್ತರನ್ನು ಉತ್ತೇಜಿಸುವ ಬದಲು ಮುಖ್ಯಮಂತ್ರಿ ಹಾಗೂ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧೀಜಿ ಅವರ ವಿಚಾರಗಳಿಗೆ ವಿರುದ್ಧವಾಗಿ ತಮ್ಮ ಕೀಳುಮಟ್ಟದ ಭಾಷಣ ಮಾಡುವ ಮೂಲಕ ಪ್ರಧಾನಿಗೆ ಅಪಮಾನ ಮಾಡಲು ವೇದಿಕೆ ಬಳಸಿಕೊಂಡಿದ್ದಾರೆ.
ಕಾಂಗ್ರೆಸ್ ಸಂಸ್ಕೃತಿಯು ಗಾಂಧಿ ಸಂಸ್ಕೃತಿಗೆ ತಿಲಾಂಜಲಿ ಇಟ್ಟಿರುವುದನ್ನು ಈ ಮೂಲಕ ಮತ್ತೆ ಸಾಬೀತು ಪಡಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ಜನಪ್ರಿಯತೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು  ತೀವ್ರ ಹತಾಶೆಯಿಂದ ವಾಗ್ದಾಳಿ ನಡೆಸಿ ತಮ್ಮ ನಾಲಿಗೆಯ ಚಪಲ ತೀರಿಸಿಕೊಳ್ಳುತ್ತಿದ್ದಾರೆ ಎಂದು ತಿಕಿಸಿದ ರವಿ, ಸಿದ್ದರಾಮಯ್ಯನವರಿಗೆ  ಮೋದಿ ಅವರು ಸಂಪೂರ್ಣವಾಗಿ ಆವರಿಸಿಕೊಂಡು ನಿದ್ದೆಯಲ್ಲಿಯೂ ಬೆಚ್ಚಿಬೀಳುವ ಪರಿಸ್ಥಿತಿ ಬಂದಿದ್ದರೆ ಆಶ್ಚರ್ಯವಿಲ್ಲಾ ಎಂದು ವ್ಯಂಗ್ಯವಾಡಿದ್ದಾರೆ. 
ಗಾಂಧಿ ಜಯಂತಿ ದಿನ ಅವರ ಆದರ್ಶಗಳಿಗೆ ಮತ್ತು ಮೌಲ್ಯಗಳಿಗೆ ತಿಲಾಂಜಲಿ ನೀಡಿ ಮಹಾತ್ಮ ಗಾಂಧಿ ಅವರಿಗೆ ಅಗೌರವ ಸೂಚಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದಿರುವ ಸಿಟಿ ರವಿ, ಮೋದಿ ಭಯದಿಂದ ಮಾನಸಿಕವಾಗಿ ಬಳಲುತ್ತಿರುವ ಕಾಂಗ್ರೆಸ್ ನಾಯಕರು ಕೂಡಲೇ ಮಾನಸಿಕ ರೋಗ ತಜ್ಞರನ್ನು ಕಂಡು ರಾಜ್ಯದ ಹಿತದೃಷ್ಟಿಯಿಂದ ಗುಣಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com