
ಬೆಂಗಳೂರು: ಬಿಬಿಎಂಪಿ ಅಧಿಕಾರ ಹಿಡಿಯುವುದಕ್ಕಾಗಿ ತಮ್ಮ ಪಕ್ಷದ ಪಾಲಿಕೆ ಸದಸ್ಯರಿಗೆ ಗಾಳ ಹಾಕಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಜೆಪಿ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಇನ್ನೊಂದು ಸುತ್ತಿನ ರೆಸಾರ್ಟ್ ರಾಜಕಾರಣ ಆರಂಭಗೊಂಡಿದ್ದು, ತಮ್ಮ ಪಕ್ಷದ ಸದಸ್ಯರನ್ನು ಬೆಂಗಳೂರು ಹೊರವಲಯದ ರೆಸಾರ್ಟ್‍ಗೆ ಸ್ಥಳಾಂತರ ಮಾಡಿ ಕಾಪಿಟ್ಟುಕೊಳ್ಳಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾಂಗ್ರೆಸ್‍ನ 76 ಸದಸ್ಯರನ್ನು ಸ್ಥಳಾಂತರಿಸಲು ಸಿದ್ಧತೆ ನಡೆದಿದೆ.
ಮೂರು ತಂಡಗಳಲ್ಲಿ ರವಾನೆ: ಬಿಬಿಎಂಪಿ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಪರಾಜಿತರಾದ ಅಭ್ಯರ್ಥಿಗಳ ನೇತೃತ್ವದಲ್ಲಿ ಕಾಂಗ್ರೆಸ್‍ನ 76 ಸದಸ್ಯರ ರಕ್ಷಣೆಗೆ ವ್ಯೂಹ ರಚಿಸಲಾಗಿದ್ದು, ಮೂರು ಬ್ಯಾಚ್ ಗಳಾಗಿ ವಿಭಾಗಿಸಿ ನಗರದ ಹೊರವಲಯದ ರೆಸಾರ್ಟ್ ಅಥವಾ ಕೇರಳಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ. ಈ ಸಂಬಂಧ ಬೆಂಗಳೂರು ನಗರದ ಎಲ್ಲ ಶಾಸಕರು ಮತ್ತು ಐವರು ಸಚಿವರು ಶನಿವಾರ ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರ ಮಧ್ಯೆ ಶುಕ್ರವಾರವೂ ಮಾತುಕತೆ ನಡೆದಿಲ್ಲ. ಇದು ಕಾಂಗ್ರೆಸ್‍ನ ತಳಮಳವನ್ನು ಹೆಚ್ಚಿಸಿದೆ. ಶನಿವಾರ ಸಾಯಂಕಾಲ ಸಭೆ ನಡೆಯುವ ಸಾಧ್ಯತೆ ಇದ್ದು, ಅಲ್ಲಿಯವರೆಗೆ ಖಚಿತವಾಗಿ ಏನನ್ನೂ ಹೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ ಎನ್ನಲಾಗಿದೆ.
ಎಷ್ಟು ಜನರಿಗೆ ಆಮಿಷ?: ಕಾಂಗ್ರೆಸ್ ಮೂಲಗಳ ಪ್ರಕಾರ 10 ಜನ ಬಿಬಿಎಂಪಿ ಸದಸ್ಯರಿಗೆ ಗಾಳ ಹಾಕಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಆಮೂಲಕ ಸದಸ್ಯರು ಮತ್ತು ಸದಸ್ಯೇತರ ಸಂಖ್ಯೆಯನ್ನು ಕಡಿಮೆ ಮಾಡುವುದು ಬಿಜೆಪಿಯ ಲೆಕ್ಕಾಚಾರ. ನಂತರ ಇದೇ ಸದಸ್ಯರಿಗೆ ಬಿಜೆಪಿಯಿಂದ ಟಿಕೆಟ್ ಕೊಡುವುದರ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ನೆರವನ್ನು ಕೊಡಲಾಗುವುದು ಎಂದು ಬಿಜೆಪಿ ಮುಖಂಡರು ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದರ ಮೂಲಕ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಭವಿಷ್ಯದಲ್ಲಿ ಮತ್ತೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ನಿಮಗೆ ಎಲ್ಲ ರೀತಿಯ ನೆರವು ನೀಡಲಾಗುಲುವುದೆಬಂ ಆಮಿಷವೊಡ್ಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಸ್ಪೀಕರ್‍ಗೆ ಸೋಮಶೇಖರ್ ತಿರುಗೇಟು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪ್ರಸ್ತಾಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಸುದ್ದಿ ಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ದೇವೇಗೌಡರು ಕಾಗೋಡು ತಿಮ್ಮಪ್ಪ ಅವರಿಗೆ ಹಗ್ಗ ಹಾಕುತ್ತಾರೋ, ಕಾಗೋಡು ತಿಮ್ಮಪ್ಪನವರು ದೇವೇಗೌಡರಿಗೆ ಹಗ್ಗ ಹಾಕುತ್ತಾರೋ ಎಂಬ ವಿಚಾರದ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ಸ್ಪೀಕರ್ ಅವರು ಈ ರೀತಿ ಮಾತನಾಡುವುದಕ್ಕೆ ಇದು ಶಿವಮೊಗ್ಗವಲ್ಲ, ಬೆಂಗಳೂರು. ಸ್ಪೀಕರ್ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು. ಈ ಬಗ್ಗೆ ನಾವು ಪಕ್ಷದ ವೇದಿಕೆಯಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದರು.
ಯಾರ್ಯಾರಿಗೆ ಗಾಳ?
ಯಲಹಂಕದ ಚೌಡೇಶ್ವರಿ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಪದ್ಮಾವತಿ ಅಮರನಾಥ್ ಅವರಿಗೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಕರೆ ಮಾಡಿ ಆಮಿಷವೊಡ್ಡಿದ್ದಾರೆ. ಇವರು ಈ ಹಿಂದೆ ಬಿಜೆಪಿಯಲ್ಲಿದ್ದರು. ಈ ಸಂಬಂಧದ ಆಧಾರದ ಮೇಲೆ ಬಿಜೆಪಿ ನಾಯಕರು ಪದ್ಮಾವತಿ ಅವರ ಪತಿ ಅಮರನಾಥ್ ಅವರಿಗೆ ಮಂಗಳವಾರದಿಂದ ಸತತ ಕರೆ ಮಾಡಿ ಆಮಿಷವೊಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಆಪರೇಷನ್ ಕಮಲದ ಮೂಲಕ ಬಿಬಿಎಂಪಿ ಸದಸ್ಯೆ ರಾಜಿನಾಮೆ ಕೊಡಿಸಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯ ಯಾವ ಮುಖಂಡರು ಮಹಿಳಾ ಸದಸ್ಯೆ ಮತ್ತು ಅವರ ಪತಿಯನ್ನು ಸಂಪರ್ಕಿಸಿದ್ದಾರೆ. ಸಂಭಾಷಣೆ ವಿವರಗಳೇನು ಎಂಬುದನ್ನು ಅಗತ್ಯ ಬಿದ್ದಾಗ ಬಹಿರಂಗಗೊಳಿಸುತ್ತೇವೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
Advertisement