'ಶಾಸಕ ಸೋಮಶೇಖರ ಡಿಕೆಶಿ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದರು': ಜಗ್ಗೇಶ್

ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ತಮ್ಮ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್...
ಜಗ್ಗೇಶ್
ಜಗ್ಗೇಶ್

ಬೆಂಗಳೂರು: ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ತಮ್ಮ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ನಟ ಜಗ್ಗೇಶ್ ಅವರು ಬುಧವಾರ ತಿರುಗೇಟು ನೀಡಿದ್ದಾರೆ.

ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರೋಧಿಸಿ ನಗರದ ಮೌರ್ಯ ಹೋಟೆಲ್ ವೃತ್ತದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಜಗ್ಗೇಶ್, ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಆ ವ್ಯಕ್ತಿ(ಎಸ್.ಟಿ.ಸೋಮಶೇಖರ್) ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದರು. ಅವರನ್ನು ಶಾಸಕ ಮಾಡಿದ್ದೇ ಡಿಕೆಶಿ ಎಂದರು. ಅಲ್ಲದೆ ನಿಮ್ಮ ಮುಸುರೆ ಬುದ್ದಿ ಬಿಟ್ಟುಬಿಡಿ ಎಂದು ಹೆಸರು ಹೇಳದೇ ಸೋಮಶೇಖರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

'ನಾವು ಮುದ್ದೆ ತಿನ್ನುವ ಒಕ್ಕಲಿಗರ ಮಕ್ಕಳು. ಕೊಟ್ಟದ್ದನ್ನು ವಾಪಸ್ ಕೊಡುವವರೆಗೂ ಸುಮ್ಮನಿರಲ್ಲ. ಬಣ್ಣ ಹಚ್ಚುವ ಕಲಾವಿದನ ಬಗ್ಗೆ ಸೋಮಶೇಖರ್ ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ಅಲ್ಲೇ ಬಂದು ತಿರುಗೇಟು ನೀಡಬೇಕು ಅನ್ನಿಸಿತ್ತು. ಆದರೆ ಕುಡಿದು ಮಾತನಾಡಿರಬೇಕು ಎಂದು ಸುಮ್ಮನಾದೆ' ಎಂದರು. ಅಲ್ಲದೆ ನಾನು ಹಣ ತೆಗೆದುಕೊಂಡು ಬಿಜೆಪಿಗೆ ಬಂದಿಲ್ಲ ಎಂದು ಜಗ್ಗೇಶ್ ಹೇಳಿದರು.

ಕಾಂಗ್ರೆಸ್ ನನ್ನನ್ನು ಕರೆದುಕೊಂಡು ಹೋಗಿ ರೋಡಿಗೆ ಬಿಟ್ಟಿತು ಎಂದು ಜಗ್ಗೇಶ್, ನನಗೆ ಗಾಂಧಿನಗರದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ, ತುರುವೇಕೆರೆಯಲ್ಲಿ ಟಿಕೆಟ್ ನೀಡುವ ಮೂಲಕ ವಂಚಿಸಿದೆ ಎಂದು ಆರೋಪಿಸಿದರು.

ಜಗ್ಗೇಶ್ ಅವಿವೇಕಿ ಎಂದು ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದರು. ಅಲ್ಲದೆ ಆರ್.ಅಶೋಕ್ ವಿರುದ್ಧವೂ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com