ರಾಘವೇಶ್ವರ ಶ್ರೀ ತನಿಖೆ ವಿಳಂಬಕ್ಕೆ ಉಮಾಶ್ರೀ ಆಕ್ರೋಶ

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಸಿಐಡಿ ಪೊಲೀಸರು ಅನುಸರಿಸುತ್ತಿರುವ ವಿಳಂಬ...
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಸಿಐಡಿ ಪೊಲೀಸರು ಅನುಸರಿಸುತ್ತಿರುವ ವಿಳಂಬ
ಧೋರಣೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ಮಕ್ಕಳ ಕಲ್ಯಾಣ ಸಮಿತಿ ಕಾರ್ಯನಿರ್ವಹಣೆ ಮತ್ತು ಪರಿಶೀಲನಾ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಚಾರದಲ್ಲಿ ನಾನು ಮೌನ ವಹಿಸಿಲ್ಲ. ತನಿಖೆ ತ್ವರಿತವಾಗಿ ನಡೆಯಬೇಕೆಂದು ಆಗ್ರಹಿಸುತ್ತೇನೆ. ಅಗತ್ಯ ಬಿದ್ದರೆ ಸಿಎಂ ಸಿದ್ದರಾಮಯ್ಯ ಮತ್ತು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆದು ಬೇಗ ತನಿಖೆ ನಡೆಸಿ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವುದಕ್ಕೆ ಪ್ರಯತ್ನನಡೆಸುತ್ತೇನೆ ಎಂದರು. ರಾಘವೇಶ್ವರ ಶ್ರೀಗಳ ವಿರುದ್ಧ ಇಬ್ಬರು ಮಹಿಳೆಯರು ಅತ್ಯಾಚಾರದ ದೂರು ನೀಡಿದ್ದಾರೆ. ದೂರು ನೀಡಿದ ಮಹಿಳೆಯರಿಗೆ ಪ್ರಾಣ ಭಯ ಇದ್ದು, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸ್ವಾಮೀಜಿ ರಾಜಾರೋಷವಾಗಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಮೊದಲ ಪ್ರಕರಣದಲ್ಲಿ ನೆಪ ಮಾತ್ರಕ್ಕೆ ಶ್ರೀಗಳ ಬಂಧನವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಪ್ರಕರಣವನ್ನು ತ್ವರಿತಗೊಳಿಸುವಂತೆ ಆಗ್ರಹಿಸುತ್ತೇನೆ ಎಂದರು. ಶ್ರೀಗಳ ವಿರುದ್ಧ ದಾಖಲಾದ ಎರಡನೇ ಪ್ರಕರಣವನ್ನೂ ಸರ್ಕಾರ ಈಗಾಗಲೇ ಸಿಐಡಿಗೆ ವರ್ಗಾಯಿಸಿದೆ. ಆದರೆ ಗಿರಿನಗರ ಠಾಣೆಯಿಂದ ಇನ್ನೂ ದಾಖಲೆ ಪತ್ರಗಳು ರವಾನೆಯಾಗಿಲ್ಲ. ಇದು ತನಿಖೆಯನ್ನು ನಿಧಾನಗೊಳಿಸುವ ದುರುದ್ದೇಶವಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈ ಬಗ್ಗೆ ಸಿಐಡಿ ಅಧಿಕಾರಿಗಳ ಗಮನ ಸೆಳೆಯುತ್ತೇನೆ ಎಂದುಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com