
ಹುಬ್ಬಳ್ಳಿ: ಮಹದಾಯಿ ನದಿ ಹಾಗೂ ಕಳಸಾ-ಬಂಡೂರಿ ನಾಲೆಗಳನ್ನು ಮಲಪ್ರಭಾ ಜಲಾಶಯಕ್ಕೆ ಜೋಡಿಸಬೇಕೆಂದು ಪ್ರತಿಭಟನೆ ತೀವ್ರಗೊಂಡಿದ್ದು, 62 ದಿನಗಳಿಂದ ಧರಣಿ ನಡೆಯುತ್ತಿರುವ ನರಗುಂದದಲ್ಲಿ ಮಂಗಳವಾರ ಮೂವರು ರೈತರು ದೀಡ್ ನಮಸ್ಕಾರ ಹಾಕಿ ಸರ್ಕಾರದ ಮೇಲೆ ಒತ್ತಡ ಹಾಕಿದರು. ಹೋರಕೇರಿ ಓಣಿಯ ಹನುಮಂತಪ್ಪ ಚುರಮರಿ, ಮೆಹಬೂಬಸಾಬ ನಾಯ್ಕರ ಹಾಗೂ ಬಾಪುರಾವ್ ಜಗತಾಪ ನರಗುಂದ ಪಟ್ಟಣದ ಸತಿಗಮ್ಮ ದೇವಸ್ಥಾನದಿಂದ ದೀಡ್ ನಮಸ್ಕಾರ ಆರಂಭಿಸಿ, ರಾಷ್ಟ್ರೀಯ ಹೆದ್ದಾರಿ ಮೂಲಕ ಬಸಪ್ಪ ಕಡ್ಲಿಕೊಪ್ಪ ವೀರಗಲ್ಲಿನ ವರೆಗೆ ಆಗಮಿಸಿದರು. ಹೋರಾಟ ನಿರ್ಲಕ್ಷಿಸಿದರೆ ತಕ್ಕ ಶಾಸ್ತಿ ಮಾಡುವುದಾಗಿ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಎಚ್ಚರಿಸಿದ್ದಾರೆ. ನರಗುಂದದ ಕೆಂಪ ಅಗಸಿ, ಗುಡ್ಡದಕೇರಿ, ಹೋರಕೇರಿ ಓಣಿಯ ರೈತರು ಮಂಗಳವಾರ ಹುಬ್ಬಳ್ಳಿ - ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಶಿವಾಜಿ ವೃತ್ತದಲ್ಲಿ ಬಂದ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಸಿಪಿಐಎಂ ಕಾರ್ಯಕರ್ತರು ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
Advertisement