
ಚಿಕ್ಕಬಳ್ಳಾಪುರ: ಎತ್ತಿನಹೊಳೆ ಹೋರಾಟ ಆ ಭಾಗದ ಹಿರಿಯ ರಾಜಕಾರಣಿಗಳಾದ ಬಿ. ಜನಾರ್ದನ ಪೂಜಾರಿ ಮತ್ತು ಎಂ.ವೀರಪ್ಪ ಮೊಯ್ಲಿ ಅವರ ಹಳೆ ರಾಜಕೀಯ ದ್ವೇಷಕ್ಕೆ ಮತ್ತೆ ಜೀವ ತುಂಬಿದೆ. ಸಂಸದ ಎಂ.ವೀರಪ್ಪ ಮೊಯ್ಲಿ ಅವರು, ಕರಾವಳಿ ಹೋರಾಟ ರಾಜಕೀಯ ಪ್ರೇರಿತ ಎಂದು ಟೀಕಿಸಿದರು. ಅಲ್ಲದೆ ತಾವು ಹೋರಾಟಗಾರರ ಕ್ಷಮೆ ಕೋರುವಂತೆ ಆಗ್ರಹಿಸಿದ್ದ ಮಾಜಿ ಸಂಸದ ಬಿ.ಜನಾರ್ದನ ಪೂಜಾರಿ ವಿರುದ್ಧವೂ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಎರಡನೇ ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಮೊಯ್ಲಿ ಮೂಲತಃ ಉಡುಪಿ ಜಿಲ್ಲೆ ಕಾರ್ಕಳದವರು.
ಇಬ್ಬರೂ ನಾಯಕರು ಒಂದೇ ಪಕ್ಷದವರು. `ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಜನಾರ್ದನ ಪೂಜಾರಿ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದು, ಸಂಸದರನ್ನು, ಸಚಿವರನ್ನಾಗಿ ಮಾಡಿದ್ದು ನಾನು. ಈಗ ಸ್ವಾರ್ಥ ರಾಜಕೀಯಕ್ಕಾಗಿ ನನ್ನ ವಿರುದ್ಧ ಕರಾವಳಿ ಜನರನ್ನು ಎತ್ತಿಕಟ್ಟುವ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ' ಎಂದು ಮೊಯ್ಲಿ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. ಬಯಲು ಸೀಮೆ ಜಿಲ್ಲೆಗಳಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ, ಕರಾವಳಿ ಯಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ನೀಡುವ ಯೋಜಗೆ ರಾಜಕೀಯ ಪ್ರೇರಿತವಾಗಿ ವಿರೋಧಿಸುತ್ತಿರುವುದು ಅಮಾನವೀಯ ಎಂದರು. ಎತ್ತಿನಹೊಳೆ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ, ಹೋರಾಟ ಗಳು ರಾಜಕೀಯ ಪ್ರೇರಿತ. ಯೋಜನೆ ನಿಲ್ಲುವುದಿಲ್ಲ. ರಾಜ್ಯ ಸರ್ಕಾರ ಎತ್ತಿನ ಹೊಳೆ ಯೋಜನೆಯನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲಿದೆ ಎಂದು ಹೇಳಿದರು.
Advertisement