ಬೆಂಕಿ ಹಚ್ಚಿ ತಮಾಷೆ ನೋಡುತ್ತಿದೆ ಕಾಂಗ್ರೆಸ್: ಬಿಎಸ್‍ವೈ ಆರೋಪ
ಹುಬ್ಬಳ್ಳಿ: ಮಹದಾಯಿ ಯೋಜನೆ ಹೆಸರಲ್ಲಿ ಸೋನಿಯಾ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಹಚ್ಚಿ ತಮಾಷೆ ನೋಡುತ್ತಿದ್ದಾರೆ. ಮಹದಾಯಿ ಯೋಜನೆ ಕುರಿತು ರಾಜ್ಯದ ಮುಂದಿನ ನಡೆ ಬಗ್ಗೆ ಚರ್ಚಿಸಲು ತುರ್ತಾಗಿ ವಿಧಾನಮಂಡಲ ಅಧಿವೇಶನ ಕರೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ಚಿತಾವಣೆಯೇ ಕಾರಣ. ಯುಪಿಎ ಸರ್ಕಾರದಲ್ಲಿ
ಪ್ರಧಾನಿಯಾಗಿದ್ದ ಮನಮೋಹನ ಸಿಂಗ್, ನ್ಯಾಯಾಧಿಕರಣದಲ್ಲಿ ಪ್ರಕರಣ ಇತ್ಯರ್ಥವಾಗಲಿ ಎಂದು ಹೇಳಿದರು. ಗೋವಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಸೋನಿಯಾ ಗಾಂಧಿ, ಮಹದಾಯಿಯಿಂದ ಕರ್ನಾಟಕಕ್ಕೆ ಹನಿ ನೀರು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದರು. ಯೋಜನೆಗೆ ಸೋನಿಯಾ ಅಡ್ಡಗಾಲು ಹಾಕಿದ್ದು ಸ್ಪಷ್ಟ ಎಂದು ಆರೋಪಿಸಿದರು.
ಮಹದಾಯಿ ಯೋಜನೆ ಅನುಷ್ಠಾನಗೊಳ್ಳದೇ ಇರಲು ಕಾಂಗ್ರೆಸ್ ಕಾರಣ. ಯೋಜನೆ ಅನುಷ್ಠಾನಕ್ಕೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಳಕಳಿ ತೋರುತ್ತಿಲ್ಲ. ಆದರೆ, ತನ್ನ ತಪ್ಪನ್ನು ಕಾಂಗ್ರೆಸ್ ಬಿಜೆಪಿಯ ಹೆಗಲೇರಿಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಹಾಲಿ ಸಂಸದ ಯಡಿಯೂರಪ್ಪ ಆರೋಪಿಸಿದರು.
ಮಹದಾಯಿ ವಿಚಾರದಲ್ಲಿ ನಾವು (ಬಿಜೆಪಿ) ರಾಜಕೀಯ ಮಾಡುತ್ತಿಲ್ಲ. ನೀವು (ಕಾಂಗ್ರೆಸ್) ಕರೆದರೆ ನಾವು ಸೋನಿಯಾ ಗಾಂಧಿಯವರ ಬಳಿಗೆ ತೆರಳಲು ಸಿದ್ಧರಿದ್ದೇವೆ ಎಂದು ಹೇಳಿದ್ದೇವೆ. ನೀವೇಕೆ ಮಾತು ನೀಡುತ್ತಿಲ್ಲ? ನರಗುಂದ ವೇದಿಕೆಗೆ ಬಂದು ಮುಖ್ಯಮಂತ್ರಿ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲಿ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ