ಎಸ್.ಎಂ ಕೃಷ್ಣ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿ: ಎಚ್.ಡಿ.ದೇವೇಗೌಡ

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ ಕೃಷ್ಣ ಮತ್ತೊಮ್ಮೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿ ಎಂದು ಮಾಜಿ ಪ್ರಧಾನಿ ಎಚ್.ಡಿ ...
ಎಸ್.ಎಂ ಕೃಷ್ಣ ಮತ್ತು ಎಚ್.ಡಿ ದೇವೇಗೌಡ
ಎಸ್.ಎಂ ಕೃಷ್ಣ ಮತ್ತು ಎಚ್.ಡಿ ದೇವೇಗೌಡ

ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ ಕೃಷ್ಣ ಮತ್ತೊಮ್ಮೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಮೈಸೂರಿನ ಕೆ. ಆರ್‌. ನಗರದಲ್ಲಿ ತಾಲೂಕು ಒಕ್ಕಲಿಗರ ಸಂಘ ಮಂಗಳವಾರ ಆಯೋಜಿಸಿದ್ದ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಎಸ್‌. ಎಂ. ಕೃಷ್ಣ ಅವರೊಂದಿಗೆ ವೇದಿಕೆ ಹಂಚಿಕೊಂಡು ಮಾತನಾಡಿದ ದೇವೇಗೌಡ ''ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಡೆಯುತ್ತಿದೆ. ಬರಗಾಲ ಎದುರಾಗಿದೆ. ಆದರೂ ರಾಜ್ಯ ಸರ್ಕಾರ ಗಂಭೀರವಾಗಿ ಗಮನಹರಿಸಿಲ್ಲ. ಎಸ್‌. ಎಂ. ಕೃಷ್ಣ ಸೂಚನೆ ನೀಡಿದ ಬಳಿಕ ಎಚ್ಚೆತ್ತುಕೊಂಡಿದೆ, ಹೀಗಾಗಿ ಎಸ್ .ಎಂ ಕೃಷ್ಣ ರಾಜ್ಯ ರಾಜಕೀಯದ ನಾಯಕತ್ವ ವಹಿಸಬೇಕು ಎಂದು ಹೇಳಿದ್ದಾರೆ.

ಎಚ್‌.ಡಿ.ದೇವೇಗೌಡ ಅವರು ಈ ದೇಶದ ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಕನ್ನಡಿಗ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ. ನಮಗೆಲ್ಲಾ ಇದೊಂದು ಹೆಮ್ಮೆಯ ಸಂಗತಿ ಎಂದು ಮಾಜಿ ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ಶ್ಲಾಘಿಸಿದ್ದಾರೆ. ಮತ್ತೊಮ್ಮೆ ಒಬ್ಬ ಕನ್ನಡಿಗ ದೇಶದ ಪ್ರಧಾನಿಯಾಗಲಿ,  ಎಂದು ಹಾರೈಸಿದರಲ್ಲದೇ, ದೇವೇಗೌಡರು ಪ್ರಧಾನಿಯಾಗಿದ್ದಾಗ ದಿಲ್ಲಿಯ ಅವರ ಮನೆಯಲ್ಲಿ ಒಟ್ಟಿಗೆ ಕುಳಿತು ಒಬ್ಬಟ್ಟು ತಿಂದಿದ್ದನ್ನು ನೆನೆಸಿಕೊಂಡರು.

ನಾನು ಮತ್ತು ದೇವೇಗೌಡರು 50ಕ್ಕೂ ಹೆಚ್ಚು ವರ್ಷಗಳಿಂದ ಪರಿಚಿತರು. 1962ರಲ್ಲಿ ನಾನು ಮದ್ದೂರಿನಿಂದ ಮತ್ತು ದೇವೇಗೌಡರು ಹೊಳೆನರಸೀಪುರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದೆವು. ಆಗಿನಿಂದಲೂ ಜೊತೆಯಲ್ಲಿದ್ದೇವೆ. ಆದರೆ ರಾಜಕಾರಣದಲ್ಲಿ ಮಾತ್ರ ಎಂದೂ ಒಂದೇ ಪಂಕ್ತಿಯಲ್ಲಿ ಕುಳಿತವರಲ್ಲ,  ಎಸ್.ಎಂ ಕೃಷ್ಣ  ಹೇಳಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬರಗಾಲ, ರೈತರ ಆತ್ಮಹತ್ಯೆ, ಕುಡಿಯವ ನೀರಿನ ಅಭಾವ ಸೇರಿದಂತೆ ಅನೇಕ ವಿಚಾರಗಳನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಎಡವಿದೆ. ಈ ವೈಫಲ್ಯ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಎಸ್‌.ಎಂ.ಕೃಷ್ಣ ಮತ್ತು ದೇವೇಗೌಡರು ಒಂದೆಡೆ ಸೇರಿ, ಚರ್ಚೆ ನಡೆಸಿ ಇದೆಲ್ಲದಕ್ಕೂ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇಂದು ಕೃಷ್ಣ ಮತ್ತು ದೇವೇಗೌಡರು ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ರಾಜಕೀಯವಾಗಿ ಇದೊಂದು ಐತಿಹಾಸಿಕವಾಗಿ ಉಳಿಯುವ ಸಭೆ ಎಂದು ಹೇಳಿದರು.

ರಾಜಕೀಯದಲ್ಲಿ ಹಿಂದೊಮ್ಮೆ ಹಾವು-ಮುಂಗಸಿಯಂತಿದ್ದ ಇಬ್ಬರು ರಾಜಕೀಯ ದಿಗ್ಗಜರು, ಒಂದೇ ವೇದಿಕೆ ಹಂಚಿಕೊಂಡು, ಪರಸ್ಪರ ಮೆಚ್ಚುಗೆ ಮಾತುಗಳನ್ನಾಡಿದ್ದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿತು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌,  ಚೆಲುವರಾಯಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com