ಮೇಯರ್ ಚುನಾವಣೆಗೆ ಗರಿಗೆದರಿದ ಚಟುವಟಿಕೆ: ಜೆಡಿಎಸ್ ಭಿನ್ನ ಶಾಸಕರಿಗೆ ಕಾಂಗ್ರೆಸ್ ಗಾಳ

ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಹಿಂದೆ ...
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಹಿಂದೆ ತೆರೆಮರೆಯಲ್ಲಿ ಹಲವು ಕಸರತ್ತುಗಳು ನಡೆದಿದ್ದರೂ, ಇದೀಗ ಮೂರು ಪಕ್ಷಗಳೂ ನೇರ ಪೈಪೋಟಿಗೆ ಇಳಿದಿವೆ.

ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳುವ ಬಗ್ಗೆ ಜೆಡಿಎಸ್ ಹಲವು ಬಾರಿ ಇಂಗಿತ ವ್ಯಕ್ತಪಡಿಸಿದೆ. ಹೀಗಾಗಿ ಸೆಪ್ಟಂಬರ್ 18 ರಂದು ಮೇಯರ್ ಮಂಜುನಾಥ್ ರೆಡ್ಡಿ ಅವರ ಅಧಿಕಾರ ಅವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಸೆಪ್ಟಂಬರ್ 19 ರಂದು ಚುನವಾಣೆಗೆ ದಿನಾಂಕ ನಿಗದಿ ಪಡಿಸಲಾಗಿದೆ.

ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಸಖ್ಯ ಬೆಳಸುವ ಬಗ್ಗೆ ಹಲವು ಮುಖಂಡರು ಆಸಕ್ತಿ ತೋರುತ್ತಿದ್ದಾರೆ. ಈ ಬಗ್ಗೆ ಮಂಗಳವಾರದ (ಆ.16) ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರ್ಚಚಿಸಿ ನಿರ್ಧರಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಚುನಾವಣೆಗಿನ್ನೂ ಒಂದು ತಿಂಗಳ ಸಮಯ ಇದೆ. ಈ ಚುನಾವಣೆಯಲ್ಲಿ ಯಾವ ತಂತ್ರಗಾರಿಕೆ ಅನುಸರಿಸಿದರೆ ಪಕ್ಷಕ್ಕೆ ಹಿತವಾಗುತ್ತದೆ ಎಂಬ ಬಗ್ಗೆ ಸಭೆಯಲ್ಲಿ ಕೂಲಂಕಷವಾಗಿ ರ್ಚಚಿಸಲಾಗುವುದು. ಬಿಜೆಪಿಯ ಎಲ್ಲ ಹಿರಿಯ ನಾಯಕರ ಅಭಿಪ್ರಾಯ ಪಡೆದು, ಸಾಧಕ ಬಾಧಕಗಳ ಬಗ್ಗೆ ವಿಚಾರ ಮಂಥನ ನಡೆಸಲಾಗುವುದು ಎಂದರು.

ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನ ಪರಿಷತ್​ಗೆ ಕಾಂಗ್ರೆಸ್​ನ 6 ಜನರು ಆಯ್ಕೆಯಾಗಿದ್ದಾರೆ. ಹಾಗಾಗಿ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್​ಗೆ 6 ಹೆಚ್ಚುವರಿ ಮತಗಳು ಲಭಿಸಲಿವೆ. ಆರ್.ವಿ. ವೆಂಕಟೇಶ್ ಹಾಗೂ ಬಿ. ಜಯಶ್ರೀ ನಿವೃತ್ತಿಯಿಂದ ನಷ್ಟವಾಗುತ್ತಿದ್ದ 2 ಮತ ಗಳನ್ನು ರಘು ಆಚಾರ್ ಹಾಗೂ ಭೈರತಿ ಸುರೇಶ್ ತುಂಬಲಿದ್ದಾರೆ. ಅಲ್ಲಂ ವೀರಭದ್ರಪ್ಪ, ಆಸ್ಕರ್ ಫರ್ನಾಂಡೀಸ್, ಕೆ.ಸಿ. ರಾಮಮೂರ್ತಿ, ಆರ್.ಬಿ. ತಿಮ್ಮಾಪೂರ, ರಿಜ್ವಾನ್ ಅರ್ಷದ್ ಮತಗಳು ಹೆಚ್ಚುವರಿಯಾಗಿ ಲಭಿಸಲಿವೆ.

ಈ ನಡುವೆ ಆಸ್ಕರ್ ಫರ್ನಾಂಡಿಸ್ ತಮ್ಮ ವೋಟರ್ ಐಡಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಹೀಗಾಗಿ ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ಉಳಿದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ವೋಟರ್ ಐಡಿಯನ್ನು  ಬೆಂಗಳೂರಿಗೆ ಬದಲಾಯಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಜೆಡಿಎಸ್ ನಿಂದ ಅಮಾನತುಗೊಂಡಿರುವ ಭಿನ್ನಮತೀಯ ಶಾಸಕರಿಗೆ ಗಾಳ ಹಾಕಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. ಕಳೆದ ಬಿಬಿಎಂಪಿ ಮೇಯರ್ ಚುನಾವಣೆ ವೇಳೆ ಪ್ರಮುಖ ಪಾತ್ರ ವಹಿಸಿದ್ದ ಚಾಮರಾಜಪೇಟೆ ಜೆಡಿಎಸ್ ಶಾಸಕ ಜಮೀರ್ ಅಹಮದ್ ಈ ಬಾರಿ ಚುನಾವಣೆ ವಿಷಯಕ್ಕೆ ಮೂಗು ತೂರಿಸದೇ ತಟಸ್ಥವಾಗಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com