ಜೆಡಿಎಸ್ ಭಿನ್ನ ಶಾಸಕರಲ್ಲೇ ಒಡಕು: ಪಕ್ಷಕ್ಕೆ ಹಿಂತಿರುಗಿದ ಶಾಸಕ ಗೋಪಾಲಯ್ಯ

ರಾಜ್ಯಸಭೆ ಚುನಾವಣೆ ವೇಳೆಯಲ್ಲಿ ಅಡ್ಡ ಮತದಾನ ಮಾಡಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಜೆಡಿಎಸ್ ತೆಕ್ಕೆಗೆ ...
ಕುಮಾರಸ್ವಾಮಿ ಹುಟ್ಟುಹಬ್ಬ ಸಂದರ್ಭದಲ್ಲಿ ಶಾಸಕ ಕೆ. ಗೋಪಾಲಯ್ಯ
ಕುಮಾರಸ್ವಾಮಿ ಹುಟ್ಟುಹಬ್ಬ ಸಂದರ್ಭದಲ್ಲಿ ಶಾಸಕ ಕೆ. ಗೋಪಾಲಯ್ಯ
Updated on

ಬೆಂಗಳೂರು: ರಾಜ್ಯಸಭೆ ಚುನಾವಣೆ ವೇಳೆಯಲ್ಲಿ ಅಡ್ಡ ಮತದಾನ ಮಾಡಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ  ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ  ಜೆಡಿಎಸ್ ತೆಕ್ಕೆಗೆ ಮರಳಿದ್ದಾರೆ.

ಜೆಡಿಎಸ್‌ ನಾಯಕತ್ವಕ್ಕೆ ಸೆಡ್ಡು ಹೊಡೆದು ಹೊರನಡೆದಿರುವ ಭಿನ್ನಮತೀಯ ಶಾಸಕರಲ್ಲೇ ಒಡಕು ಸೃಷ್ಟಿಯಾಗಿದ್ದು, ಶಾಸಕ ಕೆ.ಗೋಪಾಲಯ್ಯ ವರಿಷ್ಠರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ನಾನು ದೇವೇಗೌಡ ಮತ್ತು ಕುಮಾರಸ್ವಾಮಿಯವರ ಗರಡಿಯಲ್ಲಿ  ಬೆಳೆದವನು. ನನ್ನ ಕ್ಷೇತ್ರದ ಜನತೆ ಜೆಡಿಎಸ್‌ನಲ್ಲೇ ಉಳಿಯಬೇಕು ಎಂದು ಬಯಸಿದ್ದಾರೆ. ಆಕಸ್ಮಿಕವಾಗಿ ಕಹಿ ಘಟನೆ ನಡೆದಿದೆ. ಮತ್ತೆ ಅದನ್ನು ನೆನಪಿಸಿಕೊಳ್ಳುವುದು ಬೇಡ ಎಂದಿದ್ದಾರೆ.

ಭವಿಷ್ಯದ ರಾಜಕಾರಣಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷಗಳ ಕದತಟ್ಟುತ್ತಿರುವ ಜೆಡಿಎಸ್‌ ಭಿನ್ನರಿಗೆ ಈ ಬೆಳವಣಿಗೆಯಿಂದ ಹಿನ್ನಡೆಯಾಗಿದೆ. ಪಕ್ಷದ ನಾಯಕತ್ವಕ್ಕೆ ಶರಣಾದ ಗೋಪಾಲಯ್ಯ ಅವರ ನಡೆಗಳು ಕುತೂಹಲ ಕೆರಳಿಸಿವೆ.

ಜೆಡಿಎಸ್‌ನಿಂದ ಅಮಾನತುಗೊಂಡರೂ ಗೋಪಾಲಯ್ಯ ಅವರು ವರಿಷ್ಠರು ಹಾಗೂ ಪಕ್ಷದ ಚಿನ್ಹೆಯಡಿ ಶಾಸಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಮೇಯರ್‌ ಚುನಾವಣೆಯಲ್ಲಿ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಗೆ ಉಪಮೇಯರ್‌ ಆಗಿದ್ದ ಗೋಪಾಲಯ್ಯ ಅವರ ಪತ್ನಿ ಹಾಜರಾಗಿದ್ದರು. ಹಠ ಸಾಧನೆಯಿಂದ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ ಎಂದು ತಪ್ಪು ಒಪ್ಪಿಕೊಂಡ ಗೋಪಾಲಯ್ಯಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ಜೆಡಿಎಸ್‌ಗೆ ಮರಳಲು ತಿಂಗಳ ಹಿಂದೆಯೇ ಗೋಪಾಲಯ್ಯ ಅವರು ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿ ಸಹಾಯ ಕೇಳಿದ್ದರು. ಹುಟ್ಟುಹಬ್ಬದ ಅಂಗವಾಗಿ ಶುಕ್ರವಾರ ಕುಮಾರಸ್ವಾಮಿಯವರು ಶ್ರೀಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಗೋಪಾಲಯ್ಯ ಅವರೂ ಹಾಜರಾಗಿದ್ದರು. ಈ ವೇಳೆ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ಗೋಪಾಲಯ್ಯ ಮತ್ತು ಕುಮಾರಸ್ವಾಮಿ ಸಂಬಂಧ ಮತ್ತೆ ಬೆಸೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಗೋಪಾಲಯ್ಯ ಅವರು ಉಳಿದ ಏಳು ಶಾಸಕರಂತೆ ಹಠಮಾರಿ ಧೋರಣೆ ತಳೆದಿರಲಿಲ್ಲ. ಅಮಾನತುಗೊಂಡರೂ ತಪ್ಪು ಅರಿವಾಗಿ ಪಕ್ಷದ ಕೆಲಸ ಮಾಡಿಕೊಂಡೇ ಹೋಗುತ್ತಿದ್ದರು. ಪಕ್ಷದ ಶಿಸ್ತು ಸಮಿತಿ ಅಮಾನತು ರದ್ದತಿ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com