ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿ?

ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಅಧಿಕಾರ ಹಿಡಿಯುವ ಸಂಬಂಧ ಬಿಜೆಪಿ ಜತೆ ಕೈ ಜೋಡಿಸಲು ಜೆಡಿಎಸ್‌ ಒಲವು ಹೊಂದಿದ್ದು, ರಾಜ್ಯ ಮಟ್ಟದಲ್ಲೇ ..
ಬಿಜೆಪಿ ಮತ್ತು ಜೆಡಿಎಸ್ ಲೋಗೋ
ಬಿಜೆಪಿ ಮತ್ತು ಜೆಡಿಎಸ್ ಲೋಗೋ

ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಅಧಿಕಾರ ಹಿಡಿಯುವ ಸಂಬಂಧ ಬಿಜೆಪಿ ಜತೆ ಕೈ ಜೋಡಿಸಲು ಜೆಡಿಎಸ್‌ ಒಲವು ಹೊಂದಿದ್ದು, ರಾಜ್ಯ ಮಟ್ಟದಲ್ಲೇ ಈ ಬಗ್ಗೆ ಅಧಿಕೃತ ನಿರ್ಣಯ ಕೈಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ.

ಪ್ರಸಕ್ತ ರಾಜಕೀಯ ಸ್ಥಿತಿಯಲ್ಲಿ ಕಾಂಗ್ರೆಸ್‌ ಜತೆ ಹೋಗಲು ಬಯಸದ ಜೆಡಿಎಸ್‌ನ ಬಹುತೇಕ ಶಾಸಕರು, ಬಿಜೆಪಿ ಜತೆ ಸೇರಿ ಅಧಿಕಾರ ಹಂಚಿಕೆ ಮಾಡಿಕೊಳ್ಳೋಣ ಎಂಬ ಅಭಿಪ್ರಾಯ ಹೊಂದಿರುವುದು ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರೇ ಖುದ್ದಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಮೈತ್ರಿ ಪ್ರಸ್ತಾಪ ಇಟ್ಟಿರುವುದರಿಂದ ಬಿಜೆಪಿ ಜತೆ ಮೈತ್ರಿ ಅಂತಿಮವಾಗಬಹುದು ಎಂದು ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ಕುರಿತು ಸುದೀರ್ಘ‌ ಸಮಾಲೋಚನೆ ನಡೆಸಿದ್ದು, ಬಿಜೆಪಿ ಜತೆ ಹೋದರೆ ರಾಜಕೀಯವಾಗಿ ಪಕ್ಷಕ್ಕೂ ಲಾಭವಾಗಬಹುದು ಎಂಬ ಅಭಿಪ್ರಾಯ ಈ ವೇಳೆ ವ್ಯಕ್ತವಾಗಿದೆ.

ಜೆಡಿಎಸ್‌ ಮತ್ತು ಬಿಜೆಪಿ ಜತೆಗೂಡಿದರೆ ತುಮಕೂರು, ಮೈಸೂರು, ಬೆಂಗಳೂರು ನಗರ, ಶಿವಮೊಗ್ಗ, ರಾಯಚೂರು ಸೇರಿದಂತೆ 7 ಜಿಲ್ಲಾ ಪಂಚಾಯಿತಿ ಹಾಗೂ 20 ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಪಂಚಾಯತ್‌ಗೆ ಸೀಮಿತವಾಗಿ ಮೈತ್ರಿ ಮಾಡಿಕೊಂಡು ಯಶಸ್ವಿಯಾದರೆ ಆ ನಂತರ ಪ್ರತಿಕ್ರಿಯೆ, ಸ್ಪಂದನೆ, ಸಹಕಾರ ನೋಡಿಕೊಂಡು ಬಿಬಿಎಂಪಿ ಸೇರಿ ಮುಂದಿನ ಚುನಾವಣೆಗಳಲ್ಲಿ ಮೈತ್ರಿ ಮುಂದುವರಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಜಿಲ್ಲಾ ಘಟಕಗಳಿಗೆ ಅಧಿಕಾರ ಕೊಡುವುದು ಬೇಡ. ಆಗ, ಕೆಲವೆಡೆ ಬಿಜೆಪಿ, ಕೆಲವೆಡೆ ಕಾಂಗ್ರೆಸ್‌ ಜತೆ ಹೋಗಿ ಗೊಂದಲ ಏರ್ಪಡುತ್ತದೆ. ಸರ್ಕಾರದ ವಿರುದ್ಧ ಹೋರಾಟ ಸಾಧ್ಯವಾಗದು. ಹೀಗಾಗಿ, ರಾಜ್ಯ ಮಟ್ಟದಲ್ಲೇ ಒಂದು ನಿರ್ಣಯ ಕೈಗೊಂಡು ಅದರ ಪ್ರಕಾರ ನಡೆಯಲು ಸೂಚನೆ ನೀಡೋಣ ಎಂದು ಪ್ರಸ್ತಾಪಿಸಿದರು. ಅದಕ್ಕೆ ಸಮ್ಮತಿ ಸೂಚಿಸಿರುವ ದೇವೇಗೌಡರು ಶಾಸಕರು, ಜಿಲ್ಲಾ ಅಧ್ಯಕ್ಷರ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳೋಣ ಎಂದು ಹೇಳಿದರು ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com