ಕೊಪ್ಪಳದಲ್ಲಿ ದೇವೇಗೌಡ, ಶಾಸಕ ಅನ್ಸಾರಿ ವಾಕ್ಸಮರ

ವಿಧಾನ ಪರಿಷತ್ ಚುನಾವಣೆ ಆಯ್ತು ಈಗ ಜಿಪಂ, ತಾಪಂ ಚುನಾವಣೆ ವಿಚಾರದಲ್ಲೂ ಜೆಡಿಎಸ್‍ನೊಳಗಿನ ಭಿನ್ನಮತ...
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
ಕೊಪ್ಪಳ: ವಿಧಾನ ಪರಿಷತ್ ಚುನಾವಣೆ ಆಯ್ತು ಈಗ ಜಿಪಂ, ತಾಪಂ ಚುನಾವಣೆ ವಿಚಾರದಲ್ಲೂ ಜೆಡಿಎಸ್‍ನೊಳಗಿನ ಭಿನ್ನಮತ ಮತ್ತೆ ಬಹಿರಂಗವಾಗಿದೆ. ಅಭ್ಯರ್ಥಿಗಳ ಆಯ್ಕೆ ಪೂರ್ವಭಾವಿ ಸಭೆಗೆ ಕರೆದರೂ ಪಕ್ಷದ ಶಾಸಕ ಇಕ್ಬಾಲ್ ಅನ್ಸಾರಿ ಆಗಮಿಸಿಲ್ಲ ಎಂದು ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಕಿಡಿಕಾರಿದರೆ, ಕರೆಯದೆ ಸಭೆಗೆ ಹೋಗುವಷ್ಟು ಮರ್ಯಾದೆ ತಮಗಿದೆ ಎಂದು ಅನ್ಸಾರಿ ಅಸಮಾಧಾನ ಹೊರಹಾಕಿದ್ದಾರೆ. 
ಕೊಪ್ಪಳ ಜಿಪಂ, ತಾಪಂ ಅಭ್ಯರ್ಥಿಗಳ ಆಯ್ಕೆ ಪೂರ್ವಭಾವಿ ಸಭೆಗೆ ಆಗಮಿಸಿದ್ದ ದೇವೇಗೌಡ, ಉತ್ತರ ಕರ್ನಾಟಕದಲ್ಲಿ ಪಕ್ಷ ಬಿಟ್ಟು ಹೋದವರು ಸೋನಿಯಾ, ನಿತೀಶ್ ಕುಮಾರ್‍ರನ್ನು ಬೆಂಬಲಿಸಿದ ಉದಾಹರಣೆ ಇದೆ. ಅಂಥವರು ಇಂದು ಏನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಇಕ್ಬಾಲ್ ಅನ್ಸಾರಿ ಅವರನ್ನು ನಾನೇ ರಾಜಕೀಯಕ್ಕೆ ಕರೆದುಕೊಂಡು ಬಂದೆ. ಈ ಮಟ್ಟದವರೆಗೆ ಬೆಳೆಸಿದೆ. ಅದನ್ನು ಅವರು ನೆನೆಸಿಕೊಳ್ಳಬೇಕು. ನಮ್ಮ ಪಕ್ಷದ ಕಾರ್ಯದರ್ಶಿ ಮಾಹಿತಿ ನೀಡಿದರೂ ಸಭೆಗೆ ಬಂದಿಲ್ಲ. ಅವರು ಬಾರಿದ್ದರೂ ಯಾವುದೇ ಹಾನಿಯಿಲ್ಲ. ಪಕ್ಷ ಉಳಿಸಲು ನಮ್ಮ ಕಾರ್ಯಕರ್ತರಿದ್ದಾರೆ. ಅನ್ಸಾರಿ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದು ತಿಳಿದಿದೆ. 
ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಮತ್ತೆ ತನ್ನ ಪ್ರಾಬಲ್ಯ ಮೆರೆಯುವುದು ಖಚಿತ. ಇಲ್ಲಿ ಸೇರಿದ ಯುವಕರ ದಂಡೇ ಇದಕ್ಕೆ ಸಾಕ್ಷಿ ಎಂದು ದೇವೇಗೌಡ ಹೇಳಿದರು. ದೇವೇಗೌಡರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅನ್ಸಾರಿ, ಅಭ್ಯರ್ಥಿಗಳ ಆಯ್ಕೆ ಪೂರ್ವಾಭಾವಿ ಸಭೆಗೆ ಅವರು ನನ್ನನ್ನು ಕರೆದೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. `ನಾನು ಹೋಗಿಲ್ಲ. ಕರೆಯದೆ ಹೋಗಲು ನಮಗೂ ಮಾನ, ಮರ್ಯಾದೆ ಇದೆ. ಒಂದು ವೇಳೆ ಅವರು ನನ್ನನ್ನು ಆಹ್ವಾನಿಸಿದ್ದರೆ ಹೋಗಬೇಕೋ ಬೇಡವೋ ಎಂಬ ಬಗ್ಗೆ ಚಿಂತಿಸುತ್ತಿದ್ದೆ.' ಎಂದಿದ್ದಾರೆ. ಜತೆಗೆ, ಜೆಡಿಎಸ್ ಅನ್ನು ದೇವೇಗೌಡರು ಕಟ್ಟಿಲ್ಲ. ಪಕ್ಷದ ಕಾರ್ಯಕರ್ತರು ಲಾಠಿ ಏಟು ತಿಂದು ಬೆಳೆಸಿದ್ದಾರೆ. ಜಿಪಂ ಮತ್ತು ತಾಪಂ ಚುನಾವಣೆ ವಿಚಾರವಾಗಿ ಸದ್ಯ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ'' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com