ಬೈರತಿ ಸುರೇಶ್ ಗೆ ಟಿಕೆಟ್ ನೀಡಲು ವ್ಯಾಪಕ ವಿರೋಧ, ಕೆಪಿಸಿಸಿ ಸಭೆಯಲ್ಲಿ ವಾಗ್ದಾಳಿ

ಹೆಬ್ಬಾಳ ಕ್ಷೇತ್ರದಿಂದ ಬೈರತಿ ಸುರೇಶ್‍ಗೆ ಟಿಕೆಟ್ ನೀಡದಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ. ...
ಕೆಪಿಸಿಸಿ ಕಚೇರಿ
ಕೆಪಿಸಿಸಿ ಕಚೇರಿ

ಬೆಂಗಳೂರು: ಪಕ್ಷದ ಸದಸ್ಯರಲ್ಲದವರಿಗೆ ಟಿಕೆಟ್ ನೀಡುವುದರ ವಿರುದ್ಧ ಒಕ್ಕೊರಲಿನ ದನಿಯೆತ್ತಿರುವ ಮೂಲ ಕಾಂಗ್ರೆಸಿಗರು, ಹೆಬ್ಬಾಳ ಕ್ಷೇತ್ರದಿಂದ ಬೈರತಿ ಸುರೇಶ್‍ಗೆ ಟಿಕೆಟ್ ನೀಡದಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ. ಉಪ ಚುನಾವಣೆ, ಜಿಪಂ, ತಾಪಂ ಚುನಾವಣೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಹೊರಗಿನವರಿಗೆ ಮಣೆ ಹಾಕುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕಾಂಗ್ರೆಸ್‍ಗೆ ತಲೆನೋವಾಗಿ ಪರಿಣಮಿಸುವ ಎಲ್ಲ ಲಕ್ಷಣಗಳು ಗೋಚರಿಸಿವೆ.

ದೇವದುರ್ಗ ಮತ್ತು ಬೀದರ್ ಕ್ಷೇತ್ರಗಳಲ್ಲಿ ಅಷ್ಟಾಗಿ ಸಮಸ್ಯೆ ಇಲ್ಲದಿದ್ದರೂ ಹೆಬ್ಬಾಳ ಕ್ಷೇತ್ರದಲ್ಲಿನ ಕಿತ್ತಾಟ ಪಕ್ಷದೊಳಗಿನ ಬೇಗುದಿಗೆ ತುಪ್ಪ ಸುರಿಯುತ್ತಿದೆ. ಪಕ್ಷೇತರ ಸದಸ್ಯ ಬೈರತಿ ಸುರೇಶ್ ಕಾಂಗ್ರೆಸ್ ಟಿಕೆಟ್ ಸಿಕ್ಕಷ್ಟೇ ಉತ್ಸಾಹದಿಂದ ಓಡಾಡುತ್ತಿರುವುದಕ್ಕೆ ಹಿರಿಯ ಮುಖಂಡರಾದ ಎಚ್.ಎಂ.ರೇವಣ್ಣ, ಬಿ.ಎಲ್.ಶಂಕರ್ ಹಾಗೂ ಮೋಟಮ್ಮ ಆಕ್ಷೇಪ ವ್ಯಕ್ತಪಡಿಸಿ, ಪಕ್ಷ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಮುನಿಸಿಕೊಂಡರು.

ಕೆಪಿಸಿಸಿ ಸದಸ್ಯ ರಾಜಣ್ಣ ಮಾತನಾಡಿ, ಮಹತ್ವದ ಕ್ಷೇತ್ರವಾಗಿರುವ ಹೆಬ್ಬಾಳದಲ್ಲಿ ಪಕ್ಷದ ಸದಸ್ಯರಲ್ಲದವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ವದಂತಿ ಹಬ್ಬಿದೆ. ಸದಸ್ಯರಲ್ಲದವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದಾಗ ಸಭೆಯಲ್ಲಿದ್ದ ಎಲ್ಲ ಡಿಸಿಸಿ ವರಿಷ್ಠರು ದನಿಗೂಡಿಸಿದರರು. ತಕ್ಷಣ ಎದ್ದುನಿಂತ ಹಿರಿಯ ಮುಖಂಟ ಎಚ್.ಎಂ ರೇವಣ್ಣ, ಭೈರತಿ ಸುರೇಶ್ ಅವರ ಓಡಾಟ ಜೋರಾಗಿದೆ. ಅಲ್ಲಿನ ಜನರಿಗೆ ದುಡ್ಡು ಕೊಟ್ಟು ವ್ಯವಸ್ಥೆಯನ್ನು ಕೆಡಿಸುತ್ತಿದ್ದಾರೆ. ಬ್ಲಾಕ್ ಮಟ್ಟದ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರಿಗೆ ಹಣದ ಆಮೀಷ ತೋರಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವಂತೆ ಪ್ರಚೋದಿಸುತ್ತಿದ್ದಾರೆ. ಈ ಕೂಡಲೇ ಕೆಪಿಸಿಸಿಯಿಂದ ಬ್ಲಾಕ್ ಅಧ್ಯಕ್ಷರಿಗೆ ನೋಟಿಸ್ ನೀಡಿ ಅಮಾನತು ಮಾಡಬೇಕು. ಈ ಹಿಂದೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣರಾದವರಿಗೆ ಟಿಕೆಟ್  ನೀಡಬಾರದು ಎಂದು ಒತ್ತಾಯಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಈಗ ಬೈರತಿಗೆ ಟಿಕೆಟ್ ಕೊಟ್ಟರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ನೂರಾರು ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಕಂಟಕ ಎದುರಾಗಲಿದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com