ಹೆಬ್ಬಾಳಕ್ಕಾಗಿ ಒಡೆದ ಮನೆಯಾದ ಪಕ್ಷ, ಟಿಕೆಟ್‍ಗಾಗಿ ಕಿತ್ತಾಟ, ಮುಖಂಡರಲ್ಲೇ ತಿಕ್ಕಾಟ

ಕಾಂಗ್ರೆಸ್ ಗೆ ಹೆಬ್ಬಾಳ ಕ್ಷೇತ್ರ ತಲೆ ನೋವಾಗಿದೆ. ಟಿಕೆಟ್ ಆಕಾಂಕ್ಷಿಗಳ ಪರ-ವಿರೋಧ ನಿಂತಿರುವ ನಾಯಕರ ಧೋರಣೆಯಿಂದಾಗಿ ಕಾಂಗ್ರೆಸ್ ಅಕ್ಷರಶಃ ಒಡೆದ ಮನೆಯಾಗಿದೆ...
ಎಚ್.ಎಂ ರೇವಣ್ಣ
ಎಚ್.ಎಂ ರೇವಣ್ಣ

ಬೆಂಗಳೂರು: ಉಪ ಚುನಾವಣೆ ಸಿದ್ಧತೆ ಕಸರತ್ತಿನಲ್ಲಿರುವ ಕಾಂಗ್ರೆಸ್ ಗೆ ಹೆಬ್ಬಾಳ ಕ್ಷೇತ್ರ ತಲೆ ನೋವಾಗಿದೆ. ಟಿಕೆಟ್ ಆಕಾಂಕ್ಷಿಗಳ ಪರ-ವಿರೋಧ ನಿಂತಿರುವ ನಾಯಕರ ಧೋರಣೆಯಿಂದಾಗಿ ಕಾಂಗ್ರೆಸ್ ಅಕ್ಷರಶಃ ಒಡೆದ ಮನೆಯಾಗಿದೆ.

ಪಕ್ಷದ ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿರುವ ಇಬ್ಬರೂ ಮುಖಂಡರು ಪಕ್ಷದ ವರಿಷ್ಠರಿಗೆ ಆಪ್ತರು. ಅಷ್ಟೆ ಏಕೆ ಸಮಾನ ಪ್ರಭಾವಿಗಳು, ಪರಿಷತ್ ಸದಸ್ಯರು  ಇದರಿಂದಾಗಿ ಯಾರಿಗೆ ಟಿಕೆಟ್ ನೀಡ ಬೇಕೆನ್ನುವ  ಬಿಕ್ಕಟ್ಟು ಈಗ ಕಗ್ಗಂಟಾಗಿದೆ.

ಎಂಎಲ್ಸಿ ಎಚ್.ಎಂ. ರೇವಣ್ಣ ಈತನಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದರು. ಆದರೆ, ಟಿಕೆಟ್ ವಿಚಾರದಲ್ಲಿ ಪಕ್ಷದ ದಿಲ್ಲಿ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಕೃಪೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಭೈರತ್ ಸುರೇಶ್ ಪರಿಷತ್ತಿನಲ್ಲಿ ಕಾಂಗ್ರೆಸ್ ಸಹ ಸದಸ್ಯರಷ್ಟೇ, ಆದರೆ ಇವರು ಸಿಎಂ ಸಿದ್ದರಾಮಯ್ಯ ಅವರಿಗೆ ಇವರಿಗೆ ಟಿಕೆಟ್ ನೀಡಬೇಕೆಂದು ಮುಖ್ಯ ಮಂತ್ರಿ ಈಗಾಗಲೇ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ. ಅಂದರೆ ಇಲ್ಲಿ ಎಚ್.ಎಂ ರೇವಣ್ಣ ಪರ ಮಲ್ಲಿ ಕಾರ್ಜುನ್ ಖರ್ಗೆ ಬ್ಯಾಟಿಂಗ್ ಮಾಡಿದರೆ, ಬೈರತಿ ಸುರೇಶ್ ಪರವಾಗಿ ಸಿದ್ದರಾಮಯ್ಯ ವಕಾಲತ್ತು ವಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಟಿಕೆಟ್ ನೀಡುವ ವಿಚಾರದ ಬಗ್ಗೆ ನಿರ್ಧಾರ ಕೈಗೊಂಡು ಹೈಕಮಾಂಡ್‍ಗೆ ಸಲ್ಲಿಸಬೇಕಿದೆ. ಖರ್ಗೆ ಸಲಹೆ ಪಡೆಯಬೇಕೋ , ಸಿಎಂ ಶಿಫಾರಸು ಸ್ವೀಕರಿಸಬೇಕೋ ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೆ ಏನಾಗುವುದೋ ಅನ್ನೋ ಆತಂಕ ಎದುರಾಗಿದೆ.

ಈ ಮಧ್ಯೆ, ಹೆಬ್ಬಾಳ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕೆಂದು ಸಚಿವ ರೋಷನ್ ಬೇಗ್ ನೇತೃತ್ವದಲ್ಲಿ ಒತ್ತಡ ಹೆಚ್ಚಾಗಿದೆ. ಈ ಹಿಂದೆ ಜಾಫರ್ ಷರೀಪ್ ಮೊಮ್ಮಗ ರೆಹಮಾನ್ ಷರೀಫ್  ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದರು. ಆದ್ದರಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಎಂದು ರೆಹಮಾನ್ ಖಾನ್, ರೋಷನ್ ಬೇಗ್ ಒತ್ತಾಯಿಸುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಕೋಲಾರದಿಂದ ದೂರ ಉಳಿದ ಪರಿಷತ್ ಮಾಜಿ ಸದಸ್ಯ ನಜೀರ್ ಅಹಮ್ಮದ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಹರ್ಷದ್‍ರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಹಗ್ಗಜಗ್ಗಾಟ ನಿಲ್ಲುತ್ತಿಲ್ಲ: ಈ ಗೊಂದಲದ ಮಧ್ಯೆಯೂ ಬೈರತಿ ಸುರೇಶ್ ಮಂಗಳವಾರ ರೇವಣ್ಣ ನಿವಾಸಕ್ಕೆ ತೆರಳಿ ಚರ್ಚಿಸಿದ್ದಾರೆ. ರೇವಣ್ಣ ಅವರನ್ನು  ಮನವೊಲಿಸಲು ಯತ್ನಿಸಿದರಾದರೂ ಅದು ಫಲ ನೀಡಿಲ್ಲ. ಇಬ್ಬರಿಗೂ ಮಾತಿಗೆ ಮಾತು ನಡೆದು ಸುರೇಶ್ ಹಿಂದಿರುಗಿದ್ದಾರೆ. ಹಾಗೆಯೇ ಅಭ್ಯರ್ಥಿ ಆಯ್ಕೆ ಸಮಿತಿಯಲ್ಲಿರುವ ಸಚಿವ ಕೆ.ಜೆ.ಜಾರ್ಜ್ ಮಂಗಳವಾರ ಸಂಜೆ ಸಿದ್ದರಾಮಯ್ಯ ರನ್ನು ಭೇಟಿ ಮಾಡಿದ್ದಾರೆ. ಈ ಮಧ್ಯೆ ಮತ್ತೊಬ್ಬ ಆಕಾಂಕ್ಷಿ ಮೇಲ್ಮನೆ ಸರ್ಕಾರಿ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್ ಸಿಎಂ ಭೇಟಿ ಮಾಡಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಹೀಗೆ ದಿನವಿಡೀ ಗೊಂದಲ ದಿಂದಲೂ ಮುಂದುವರಿದ ಹೆಬ್ಬಾಳ ಬೆಳವಣಿಗೆ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರುವಂತೆ ಮಾಡಲು ಜಿಲ್ಲಾ ಕಾಂಗ್ರೆಸ್ ಸಮಿತಿ ಖಾಸಗಿ ಹೊಟೇಲ್‍ನಲ್ಲಿ ಪದಾದಿಕಾರಿಗಳ ಸಭೆಯನ್ನೂ ನಡೆಸಿದ್ದಾರೆ. ಇದರಲ್ಲಿ ದಿನೇಶ್ ಗುಂಡೂರಾವ್  ಮತ್ತು ಸಚಿವ ಕೆ.ಜೆ.ಜಾರ್ಜ್ ಭಾಗವಹಿಸಿದ್ದರೆಂದೂ ಹೇಳಲಾಗಿದೆ. ಇಷ್ಟಾದರೂ ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಯಾರೆನ್ನುವುದು ಸ್ಪಷ್ಟವಾಗಲಿಲ್ಲ. ಪಕ್ಷದ ವರಿಷ್ಠರು ಕೂಡ ಸೂಕ್ತ ನಿರ್ಧಾರಕ್ಕೆ ಬರಲು ಆಗಲಿಲ್ಲ. ಆದ್ದರಿಂದಲೂ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಹೆಬ್ಬಾಳದಲ್ಲಿ ಅಲ್ಪಸಂಖ್ಯಾತರು ಹಿಂದೆ ಸ್ಪರ್ಧಿಸಿದ್ದರು ಎನ್ನುವ ಮಾತ್ರಕ್ಕೆ ಮತ್ತೆ ಅವರಿಗೇ ಟಿಕೆಟ್ ನೀಡಬೇಕೆಂದು ವಿನಂತಿಸಿದ್ದಾರೆ.

ಈ ಬಗ್ಗೆ ಸಿಎಂ ಮತ್ತು ನಾನು ಚರ್ಚಿಸುತ್ತೇವೆ ಎಂದಿದ್ದಾರೆ. ಇನ್ನು ಭೈರತಿ ಸುರೇಶ್ ವಿಚಾರಕ್ಕೆ ಸಂಬಂಧಿಸಿ ಸುರೇಶ್ ಅವರು ಕಾಂಗ್ರೆಸ್ ಸಹ ಸದಸ್ಯರು. ಇಲ್ಲಿ ಯಾರು
ಯಾರನ್ನು ಭೇಟಿ ಮಾಡಿದರು ಎನ್ನುವುದು ಮುಖ್ಯವಲ್ಲ. ವೀಕ್ಷಕರ ಸಮಿತಿ ನೀಡಿದ
ವರದಿಯನ್ನಾಧರಿಸಿ ಅಭ್ಯರ್ಥಿಯ ನ್ನು ಹೈಕಮಾಂಡ್ ಗೆ ಶಿಪಾರಸು ಮಾಡುತ್ತೇವೆ ಎಂದಿದ್ದಾರೆ.ಇದೇ ಧಾಟಿಯಲ್ಲಿ ಮಾತನಾಡಿರುವ ಸಚಿವ ಕೆ. ಜೆ.ಜಾರ್ಜ್, ಹೆಬ್ಬಾಳದಲ್ಲಿ ಕಳೆದ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಕ್ಕಿತ್ತು ಎಂದು ಈ ಬಾರಿಯೂ ನೀಡಬೇಕೆಂದೇನೂ ಅಲ್ಲ ಎಂದಿದ್ದಾರೆ. ಈ ಮಧ್ಯೆ, ಕಾಂಗ್ರೆಸ್ ಮುಖಂಡ ರವಿಶಂಕರ್ ಶೆಟ್ಟಿ ಟಿಕೆಟ್ ಕೊಡಿ ಎಂದು ಲಾಬಿ ನಡೆಸುತ್ತಿದ್ದಾರೆ. ಬುಧವಾರ ಬೆಂಗಳೂರಿಗೆ ಆಗಮಿಸುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸುವ ಸಾಧ್ಯತೆಗಳಿವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com