ಉಪ ಚುನಾವಣೆ: ಹೆಬ್ಬಾಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೈರತಿ ಸುರೇಶ್ ಆಯ್ಕೆ

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೈರತಿ ಸುರೇಶ್ ಅವರು ಕಣಕ್ಕಿಳಿಯುವುದು ಬಹುತೇಕ...
ಭೈರತಿ ಸುರೇಶ್
ಭೈರತಿ ಸುರೇಶ್
ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೈರತಿ ಸುರೇಶ್ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. 
ಟಿಕೆಟ್ ನೀಡುವ ವಿಚಾರದಲ್ಲಿ ಎದ್ದಿದ್ದ ಭಿನ್ನಮತಕ್ಕೆ ತೆರೆ ಎಳೆಯುವ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಕ್ಷೇತ್ರ ವೀಕ್ಷಕರ ತಂಡ ರಚಿಸಿತ್ತು. 
ಜಾರ್ಜ್ ನೇತೃತ್ವದ ಕ್ಷೇತ್ರ ವೀಕ್ಷಕರ ತಂಡ ಇಂದು ಭೈರತಿ ಸುರೇಶ್ ಅವರ ಹೆಸರನ್ನು ಆಯ್ಕೆಮಾಡಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರಿಗೆ ವರದಿ ಸಲ್ಲಿಸಿದೆ.
ಪರಮೇಶ್ವರ ಅವರು ಈ ವರದಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ ರವಾನಿಸಲಿದ್ದು, ಅವರು ಇನ್ನೆರಡು ದಿನಗಳಲ್ಲಿ ಹೆಬ್ಬಾಳ ಕಾಂಗ್ರೆಸ್ ಅಭ್ಯರ್ಥಿಯನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ಒಂದೊಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ನಿಷ್ಠಾವಂತ ಭೈರತಿ ಸುರೇಶ್ ಅವರಿಗೆ ಟಿಕೆಟ್ ಕೊಡಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದು, ಇತ್ತ ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಭೈರತಿಗೆ ಟಿಕೆಟ್ ನೀಡುವುದು ಸುತಾರಾಂ ಇಷ್ಟವಿಲ್ಲ. ಹಾಗಾಗಿ ಪಕ್ಷದ ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹತ್ತಿರ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ದಿಗ್ವಿಜಯ್ ಸಿಂಗ್ ಅವರಿಗೆ ಮನವರಿಕೆ ಮಾಡಲು ಯತ್ನಿಸಿರುವ ಮಲ್ಲಿಕಾರ್ಜುನ ಖರ್ಗೆ, 2012ರ ಜೂನ್ ನಲ್ಲಿ ನಡೆದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತು ಅವಮಾನ ಅನುಭವಿಸಿದ್ದನ್ನು ಗಮನಕ್ಕೆ ತಂದರು. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಅವರ ಬೆಂಬಲಿಗರ ಪ್ರೋತ್ಸಾಹದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸುರೇಶ್ ಭೈರತಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಖರ್ಗೆಯವರ ನಿಷ್ಠಾವಂತ ಇಕ್ಬಾಲ್ ಅಹ್ಮದ್ ಸರಡಗಿಯವರನ್ನು ಸೋಲಿಸಿದ್ದರು.
ಪಕ್ಷದ ಮೂಲ ಸದಸ್ಯರಲ್ಲದವರಿಗೆ ಟಿಕೆಟ್ ನೀಡುವುದರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಮಾತ್ರವಲ್ಲದೆ ಒಕ್ಕೊರಲಿನ ದನಿಯೆತ್ತಿರುವ ಮೂಲ ಕಾಂಗ್ರೆಸಿಗರು, ಹೆಬ್ಬಾಳ ಕ್ಷೇತ್ರದಿಂದ ಬೈರತಿ ಸುರೇಶ್‍ಗೆ ಟಿಕೆಟ್ ನೀಡದಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಯಾರ ಕೈಹಿಡಿಯಲಿದೆ ಎಂಬುದು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com