ಹೆಬ್ಬಾಳ ಉಪ ಚುನಾವಣೆ: ಭೈರತಿ ಸುರೇಶ್ ಬಿ ಫಾರಂಗೆ ಕಾಂಗ್ರೆಸ್ ಹೈಕಮಾಂಡ್ ತಡೆ

ಹೆಬ್ಬಾಳ ವಿಧಾನಸಭೆ ಉಪ ಚುನಾವಣೆ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಫ್ತ..
ಭೈರತಿ ಸುರೇಶ್
ಭೈರತಿ ಸುರೇಶ್
ಬೆಂಗಳೂರು: ಹೆಬ್ಬಾಳ ವಿಧಾನಸಭೆ ಉಪ ಚುನಾವಣೆ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಫ್ತ ಹಾಗೂ ವಿಧಾನ ಪರಿಷತ್ ಸದಸ್ಯ ಭೈರತಿ ಸುರೇಶ್ ಹೆಸರಿನಲ್ಲಿ ಸಿದ್ಧವಾಗಿದ್ದ ಬಿ ಫಾರಂಗೆ ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ತಡೆ ನೀಡಿದೆ.
ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಅವರು ವರಿಷ್ಠರ ಬಳಿ ಹೆಬ್ಬಾಳ ಕ್ಷೇತ್ರದಿಂದ ತಮ್ಮ ಮೊಮ್ಮಗನಿಗೆ ಟಿಕೆಟ್ ದೊರಕಿಸಿ ಕೊಡಲು ತೀವ್ರ ಲಾಬಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿ ಫಾರಂಗೆ ತಡೆ ನೀಡಲಾಗಿದೆ.
ತಮ್ಮ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ಕೊಡಿಸಲು ಜಾಫರ್ ಷರೀಫ್ ಶತಾಯಗತಾಯ ಯತ್ನಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಭೈರತಿ ಸುರೇಶ್ ಗೆ ಬಿ ಫಾರಂ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸೂಚನೆ ನೀಡುವ ಮೂಲಕ ಹೆಬ್ಬಾಳ ಕ್ಷೇತ್ರದ ಟಿಕೆಟ್ ಹಂಚಿಕೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇಂದು ಸಂಜೆಯೊಳಗೆ ಹೆಬ್ಬಾಳ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಲಿದೆ ಎಂದು ವರದಿ ವಿವರಿಸಿದೆ. ಆ ನಿಟ್ಟಿನಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿ ಸಿಕೆ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com