ಬೆಂಗಳೂರು: ಹೆಬ್ಬಾಳ ವಿಧಾನಸಭೆ ಉಪ ಚುನಾವಣೆ ಟಿಕೆಟ್ ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ತಮ್ಮ ಆಫ್ತ ಹಾಗೂ ವಿಧಾನ ಪರಿಷತ್ ಸದಸ್ಯ ಭೈರತಿ ಸುರೇಶ್ ಅವರಿಗೆ ಟಿಕಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಭೈರತಿ ಸುರೇಶ್ ಹೆಸರಿನಲ್ಲಿ ಸಿದ್ಧವಾಗಿದ್ದ ಬಿ ಫಾರಂಗೆ ತಡೆ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್, ಸಂಜೆ ವೇಳೆಗೆ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಅವರ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ನೀಡಿದೆ.
ಕಳೆದ ವಿಧಾಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿದ್ದ ರೆಹಮಾನ್ ಷರೀಫ್ ಅವರಿಗೆ ಮತ್ತೆ ಟಿಕೆಟ್ ಕೊಡಿಸುವಲ್ಲಿ ಜಾಫರ್ ಷರೀಫ್ ಅವರು ಯಶಸ್ವಿಯಾಗಿದ್ದಾರೆ.
ಸಿದ್ದರಾಮಯ್ಯ ಅವರು ಭೈರತಿ ಸುರೇಶ್ ಪರ ಲಾಬಿ ಮಾಡಿದ್ದರು. ಆದರೆ ಭೈರತಿ ಸುರೇಶ್ ಗೆ ಬಿ ಫಾರಂ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸೂಚನೆ ನೀಡಿತ್ತು.