ಬೆಂಗಳೂರು: ದಲಿತ ಸಿಎಂ ಪರ ಬ್ಯಾಟಿಂಗ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ.ಜಾಫರ್ ಷರೀಫ್ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ಯೋಜನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದ ಅರಮನೆ ಮೈದಾನದಲ್ಲಿ ದಲಿತ ನಾಯಕ ದಿ.ಬಸವಲಿಂಗಪ್ಪ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಾಫರ್ ಷರೀಫ್ ಅವರು, ದಲಿತರು ಸಿಎಂ ಆಗಬೇಕೆಂಬುದು ಇವತ್ತಿನ ಬೇಡಿಕೆಯೇನಲ್ಲ. ಆದರೆ ಅವಕಾಶ ಇದ್ದಾಗಲೆಲ್ಲಾ ದಲಿತರಿಗೆ ಸಿಎಂ ಸ್ಥಾನ ತಪ್ಪಿದೆ. ಈ ಹಿಂದೆ ಬಸವಲಿಂಗಪ್ಪ ಅವರಿಗೂ ಸಿಎಂ ಸ್ಥಾನ ತಪ್ಪಿದೆ ಎಂದರು.
ಇದೇ ವೇಳೆ ಅನ್ನ ಭಾಗ್ಯ ಯೋಜನೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಕೇಂದ್ರ ಸಚಿವ. ಅನ್ನಭಾಗ್ಯ ಯೋಜನೆ ಜನರಿಗೆ ತಲುಪಿಯೇ ಇಲ್ಲ. ಈ ಯೋಜನೆ ಕೇವಲ ಫ್ಲೆಕ್ಸ್ ಮತ್ತು ಬ್ಯಾನರ್ ಗೆ ಸೀಮಿತವಾಯ್ತೇ? ಎಂದು ಪ್ರಶ್ನಿಸಿದರು. ಅಲ್ಲದೆ ಯೋಜನೆಗಳು ಯಾವಾಗಲೂ ಜನಪರವಾಗಿರಬೇಕು. ವ್ಯಕ್ತಿಗತವಾದ ಯೋಜನೆಗಳು ಜನರನ್ನು ತಲುಪುವುದಿಲ್ಲ ಎಂದರು.