ವಿಧಾನ ಪರಿಷತ್ ಸಭಾಪತಿ ಸ್ಥಾನ: ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ
ಬೆಂಗಳೂರು: ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ನ 8 ಶಾಸಕರು ಕಾಂಗ್ರೆಸ್ ಗೆ ಅಡ್ಡಮತದಾನ ಮಾಡಿ ಪಕ್ಷದಿಂದ ಅಮಾನತುಗೊಂಡ ಬೆನ್ನಲ್ಲೇ, ವಿಧಾನ ಪರಿಷತ್ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.
ವಿಧಾನ ಪರಿಷತ್‍ನ ಸಭಾಪತಿ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸಿ ಶಿಕ್ಷಕರ ಕ್ಷೇತ್ರದಿಂದ 7 ಬಾರಿ ಆಯ್ಕೆಯಾಗಿರುವ ಜೆಡಿಎಸ್‍ನ ಬಸವರಾಜ ಹೊರಟ್ಟಿ ಅವರನ್ನು ನೂತನ ಸಭಾಪತಿಯನ್ನಾಗಿ ನೇಮಿಸಿದರೇ, ಕಾಂಗ್ರೆಸ್ ಉಪ ಸಭಾಪತಿ ಸ್ಥಾನ ಪಡೆದುಕೊಳ್ಳಲಿದೆ.
ಸದ್ಯ ಜೆಡಿಎಸ್ ಪರಿಷತ್ ನಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಡಿ.ಎಚ್. ಶಂಕರಮೂರ್ತಿ ಅವರನ್ನು ಪರಿಷತ್ ಸಭಾಪತಿಯನ್ನಾಗಿ ಮಾಡಿತ್ತು. ಉಪಸಭಾಪತಿಯಾಗಿ ಜೆಡಿಎಸ್ ನ ಮರಿ ತಿಬ್ಬೇಗೌಡ ನೇಮಕವಾಗಿದ್ದರು.
ಬದಲಾದ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಸಂಬಂಧ ಮುರಿದುಕೊಳ್ಳಲು ನಿರ್ಧರಿಸಿರುವ ಜೆಡಿಎಸ್ ಕಾಂಗ್ರೆಸ್ ಜೊತೆ ಹೊಂದಾಣಿಕೆಗೆ ಸಿದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಜೆಡಿಎಸ್ ಶಾಸಕ ಬಸವರಾಜ ಹೊರಟ್ಟಿ ಮತ್ತು ವೈ ಎಸ್ ವಿ ದತ್ತ ಅವರ ಜೊತೆ ಮಾತು ಕತೆ ನಡೆಸಿದ್ದಾರೆ.
ಇನ್ನೂ ಈ ಸಂಬಂಧ ಈ ಇಬ್ಬರು ಶಾಸಕರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡರ ಜೊತೆ ಚರ್ಚೆ ನಡೆಸಲಿದ್ದಾರೆ. ಒಂದು ವೇಳೆ ಈ ಹೊಂದಾಣಿಕೆಗೆ ದೇವೇಗೌಡರು ಅನುಮತಿ ನೀಡಿದರೇ, ಡಿ.ಎಚ್ ಶಂಕಮೂರ್ತಿ ಅವರನ್ನು ಪದಚ್ಯುಗೊಳಿಸಲು ವಿಶ್ವಾಸಮತ್ ಗೊತ್ತುವಳಿ ಮಂಡಿಸುವುದಿಲ್ಲ ಎಂದು ಜೆಡಿಎಸ್ ಶಾಸಕರೊಬ್ಬರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
75 ಸದಸ್ಯರ ಸಂಖ್ಯಾಬಲದ ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್ 29, ಜೆಡಿಎಸ್ 11, ಬಿಜೆಪಿ 26 ಸದಸ್ಯರನ್ನು ಹೊಂದಿದೆ. ಉಳಿದ ಐವರು ಪಕ್ಷೇತರ ಸದಸ್ಯರು ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆಗೆ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ